ಬೆಂಗಳೂರು, ನ.25 (DaijiworldNews/PY): "ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತಿ ಹೆಚ್ಚು ಎನ್ಪಿಎ ಉಳಿಸಿಕೊಂಡಿರುವುದೇ ಕಾರ್ಪೊರೇಟ್ ಸಂಸ್ಥೆಗಳು. ಹೀಗಿರುವಾಗ ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕಿಂಗ್ ಲೈಸೆನ್ಸ್ ಕೊಡುವುದು ಕುರಿ ಕಾಯಲು ತೋಳ ಬಿಟ್ಟಂತೆ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತಿ ಹೆಚ್ಚು ಎನ್ಪಿಎ ಉಳಿಸಿಕೊಂಡಿರುವುದೇ ಕಾರ್ಪೊರೇಟ್ ಸಂಸ್ಥೆಗಳು. ಹೀಗಿರುವಾಗ ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕಿಂಗ್ ಲೈಸೆನ್ಸ್ ಕೊಡುವುದು ಕುರಿ ಕಾಯಲು ತೋಳ ಬಿಟ್ಟಂತೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಬ್ಯಾಂಕಿಂಗ್ ಲೈಸೆನ್ಸ್ ಕೊಡುವ ಮುನ್ನ ಆರ್ಬಿಐ, ತನ್ನ ಆಂತರಿಕ ತಜ್ಞರ ಸಮಿತಿ ದಾಖಲಿಸಿರುವ ವಿರೋಧವನ್ನು ಗಮನಿಸಲಿ" ಎಂದಿದ್ದಾರೆ.
"ಬ್ಯಾಂಕಿಂಗ್ ಲೈಸೆನ್ಸ್ ಪಡೆದುಕೊಳ್ಳುವ ಕಾರ್ಪೊರೇಟ್ ಸಂಸ್ಥೆಗಳು ಜನರ ಠೇವಣಿ ಹಣವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು.ತಮ್ಮದೇ ಅಧೀನ ಸಂಸ್ಥೆಗಳಿಗೆ ಪ್ರಭಾವ ಬೀರಿ ಸಾಲ ಕೊಡುವುದಿಲ್ಲ ಎಂಬುದಕ್ಕೆ ಖಾತ್ರಿಯೇನು?. ಬ್ಯಾಂಕಿಂಗ್ ನಡೆಸುವ ಕಾರ್ಪೊರೇಟ್ ಸಂಸ್ಥೆಗಳ ಮೇಲೆ ಆರ್ಬಿಐ ಹೇಗೆ ನಿಯಂತ್ರಣ ಸಾಧಿಸಲಿದೆ ಎಂಬುದನ್ನು ಸ್ಪಷ್ಟಪಡಿಸಲಿ" ಎಂದು ತಿಳಿಸಿದ್ದಾರೆ.