ನವದೆಹಲಿ, ನ. 25 (DaijiworldNews/MB) : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಹ್ಮದ್ ಪಟೇಲ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ''ಅಹ್ಮದ್ ಪಟೇಲ್ ಜಿ ಅವರ ನಿಧನದಿಂದ ಬೇಸರವಾಯಿತು. ಅವರು ಸಮಾಜಕ್ಕೆ ಸೇವೆ ಸಲ್ಲಿಸುವ ಮೂಲಕವೇ ತನ್ನ ಜೀವನವನ್ನು ಕಳೆದರು. ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಅವರ ಪಾತ್ರ ಯಾವಾಗಲೂ ನೆನಪಿನಲ್ಲಿ ಉಳಿಯುವಂತದ್ದು. ಅವರ ಮಗ ಫೈಸಲ್ ಅವರೊಂದಿಗೆ ಮಾತನಾಡಿ ಸಂತಾಪ ವ್ಯಕ್ತಪಡಿಸಿದೆ. ಅಹ್ಮದ್ ಭಾಯ್ ಅವರ ಆತ್ಮಕ್ಕೆ ಶಾಂತಿ ದೊರಕಲಿ'' ಎಂದಿದ್ದಾರೆ.
''ಇದು ದುಃಖದ ದಿನ. ಅಹ್ಮದ್ ಪಟೇಲ್ ಅವರು ಕಾಂಗ್ರೆಸ್ ಪಕ್ಷದ ಆಧಾರಸ್ತಂಭವಾಗಿದ್ದರು. ಅವರು ಕಾಂಗ್ರೆಸ್ಗಾಗಿ ಜೀವಿಸಿದರು. ಪಕ್ಷದ ಅತ್ಯಂತ ಕಷ್ಟದ ಸಮಯದಲ್ಲಿ ಪಕ್ಷದೊಂದಿಗೆ ನಿಂತರು. ಅವರು ಪಕ್ಷಕ್ಕೆ ಅಪಾರ ಆಸ್ತಿ. ನಾವು ಅವರನ್ನು ಮಿಸ್ ಮಾಡುತ್ತೇವೆ. ಫೈಸಲ್, ಮುಮ್ತಾಜ್ ಮತ್ತು ಕುಟುಂಬಕ್ಕೆ ನನ್ನ ಸಂತಾಪ ವ್ಯಕ್ತಪಡಿಸುತ್ತೇನೆ'' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
''ಅಹ್ಮದ್ ಪಟೇಲ್ ನಿಧನದಿಂದ ಕಾಂಗ್ರೆಸ್ ಪಕ್ಷ ನಿಷ್ಠಾವಂತ ನಾಯಕನನ್ನು ಮತ್ತು ನಾನು ನಂಬಿಕಸ್ತ ಗೆಳೆಯನನ್ನು ಕಳೆದುಕೊಂಡಿದ್ದೇನೆ. ನನ್ನ ರಾಜಕೀಯ ಬದುಕಿನ ಪ್ರಮುಖ ನಿರ್ಧಾರಕ್ಕೆ ಕಾರಣರಾಗಿದ್ದ ಪಟೇಲ್ ಅವರು ಕೊನೆಯವರೆಗೆ ಹಿತೈಷಿಯಾಗಿದ್ದವರು. ಈ ಸಾವಿನ ದು:ಖ ಮಾತುಗಳನ್ನು ಮೀರಿದ್ದು. ಹೋಗಿಬನ್ನಿ ಪಟೇಲ್ಜಿ'' ಎಂದು ಕರ್ನಾಟಕ ರಾಜ್ಯದ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಟ್ವೀಟ್ ಮಾಡಿ, ''ಎಐಸಿಸಿ ಖಜಾಂಚಿ ಮತ್ತು ಕಾಂಗ್ರೆಸ್ ಪಕ್ಷದ ಅಗ್ರಗಣ್ಯ ನಾಯಕರಾದ ಅಹ್ಮದ್ ಪಟೇಲ್ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖ ಮತ್ತು ಆಘಾತವಾಯಿತು. ಕಾಂಗ್ರೆಸ್ ಪಕ್ಷಕ್ಕೆ ಮತ್ತು ರಾಷ್ಟ್ರಕ್ಕೆ ಅವರ ಅಚಲ ನಿಷ್ಠೆ ಮತ್ತು ಕೊಡುಗೆ ಆದರ್ಶಪ್ರಾಯ ಹಾಗೂ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಅವರ ಕುಟುಂಬಕ್ಕೆ ಸಂತಾಪಗಳು'' ಎಂದು ಹೇಳಿದ್ದಾರೆ.