ನವದೆಹಲಿ, ನ.25 (DaijiworldNews/PY): ಕಾಬೂಲ್ ನದಿಗೆ ಶಾಹತೂತ್ ಅಣೆಕಟ್ಟು ಕಟ್ಟಲು ಪಾಕ್ನ ಆಕ್ಷೇಪವನ್ನು ಭಾರತವು ನಿರ್ಲಕ್ಷಿಸಿದ್ದು, ತನ್ನ ಪ್ರಭಾವವನ್ನು ಅಫ್ಗಾನಿಸ್ತಾನದಲ್ಲಿ ಹೆಚ್ಚಿಸಿಕೊಳ್ಳುವ ಪಾಕ್ನ ಯತ್ನಕ್ಕೆ ಭಾರತವು ಈ ಮುಖೇನ ತಡೆವೊಡ್ಡಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು, "ಶಾಂತಿ ಸ್ಥಾಪನೆಯ ಮುಂದಾಳತ್ವವು ಅಫ್ಗಾನಿಸ್ತಾನದ್ದೇ ಆಗಿರಬೇಕು" ಎಂದಿದ್ದಾರೆ.
ಪಾಕಿಸ್ತಾನವು ಅಫ್ಗಾನಿಸ್ತಾನದ ತಾಲಿಬಾನ್ ಉಗ್ರರೊಂದಿಗೆ ಶಾಂತಿ ಮಾತುಕತೆ ಮಾಡಲು ತಯಾರಾಗಿದ್ದು, ಪಾಕಿಸ್ತಾನ ಶಾಂತಿ ಮಾತುಕತೆ ನಡೆಸಿದರೆ ಅಫ್ಗಾನಿಸ್ತಾನದಲ್ಲಿ ಪಾಕ್ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲಿದೆ. ಇನ್ನು ಈ ನಡುವೆ ಈ ಅಣೆಕಟ್ಟು ನಿರ್ಮಾಣ ಮಾಡಲು ಅಫ್ಗಾನಿಸ್ತಾನಕ್ಕೆ ಭಾರತ ಬೆಂಬಲ ಸೂಚಿಸಿದ್ದು, ನೆರವು ನೀಡಲು ಒಪ್ಪಂದ ಮಾಡಿಕೊಂಡಿದೆ.
ಕಾಬೂಲ್ ನದಿಗೆ ಅಣೆಕಟ್ಟು ಕಟ್ಟಿದರೆ, ಪಾಕಿಸ್ತಾನಕ್ಕೆ ಹರಿಯುವ ನೀರು ಕಡಿವೆಯಾಗಲಿದ್ದು, ಈ ಕಾರಣದಿಂದ ಕೃಷಿಗೆ ಸಮಸ್ಯೆಯಾಗುತ್ತದೆ. ಪಾಕಿಸ್ತಾನದಲ್ಲಿನ ಸಣ್ಣ ನದಿಗಳು ಅಫ್ಗಾನಿಸ್ತಾನವನ್ನು ಪ್ರವೇಶಿಸುತ್ತವೆ. ಅಲ್ಲದೇ, ಅಲ್ಲಿ ಕಾಬೂಲ್ ನದಿಯನ್ನು ಸೇರಿ, ಬಳಿಕ ಪಾಕಿಸ್ತಾನವನ್ನು ಪುನಃ ಸೇರುತ್ತವೆ. ಶಾಹತೂತ್ ಅಣೆಕಟ್ಟು ನಿರ್ಮಾಣ ಮಾಡುವುದರಿಂದ ಪಾಕಿಸ್ತಾನಕ್ಕೆ ಈ ನದಿಗಳ ನೀರು ಹರಿಯುವುದು ನಿಲ್ಲುತ್ತದೆ ಎಂದು ಪಾಕ್ ಆಕ್ಷೇಪಿಸಿತ್ತು.
ಕಾಬೂಲ್ ನದಿಯ ನೀರನ್ನು ಹಂಚಿಕೊಳ್ಳುವ ವಿಚಾರವಾಗಿ ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾವವನ್ನು ಪಾಕ್ ಅಫ್ಗಾನಿಸ್ತಾನದ ಮುಂದೆ ಇರಿಸಿದ್ದು, ಈ ಒಪ್ಪಂದ ಮಾಡಿಕೊಳ್ಳಲು ಅಫ್ಗಾನಿಸ್ತಾನ ತಯಾರಾಗಲಿಲ್ಲ.