ನವದೆಹಲಿ, ನ. 25 (DaijiworldNews/MB) : ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ತಮಿಳುನಾಡಿನ ಕರಾವಳಿ ಮೇಲೆ ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು ಈ ಚಂಡಮಾರುತ ತೀವ್ರ ಸ್ವರೂಪ ತಳೆಯುವ ಸಾಧ್ಯತೆಯಿದೆ. ಇದರ ಜತೆಗೆ ಪ್ರತಿ ಗಂಟೆಗೆ 100 ರಿಂದ 110 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿಸಿರುವ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಬುಧವಾರ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಅಲ್ಲದೆ ತಮಿಳುನಾಡಿನ 7 ಜಿಲ್ಲೆಗಳಲ್ಲಿ ಬಸ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ನಿವಾರ್ ಚಂಡಮಾರುತ ಮಂಗಳವಾರ ರಾತ್ರಿಯೇ ತೀವ್ರ ಸ್ವರೂಪ ತಳೆದಿದ್ದು ಬುಧವಾರ ತಮಿಳುನಾಡು ಮತ್ತು ಪುದುಚೇರಿಯನ್ನು ಕಾರೈಕಲ್ ಮತ್ತು ಮಾಮಲ್ಲಪುರಂ ನಡುವೆ ಹಾದು ಹೋಗಲಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ತಮಿಳುನಾಡು ಮತ್ತು ಪುದುಚೇರಿಯ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಯಾವುದೇ ಸಂದರ್ಭದಲ್ಲೂ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
ಆಂಧ್ರಪ್ರದೇಶದಲ್ಲಿಯೂ ಸಿದ್ದತೆ ಕೈಗೊಳ್ಳಾಗಿದ್ದು ಕರಾವಳಿ ಪ್ರದೇಶ ರಾಯಲಸೀಮಾದಲ್ಲಿ ವಿಶೇಷ ರಕ್ಷಣೆ ಹಾಗೂ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ.
ತಮಿಳುನಾಡು, ಪುದುಚೇರಿ ಸೇರಿದಂತೆ ಹಲವು ರಾಜ್ಯದಲ್ಲಿ ಮೀನುಗಾರರು ನೀರಿಗೆ ಇಳಿಯದಂತೆ ಕಟ್ಟೆಚ್ಚರ ನೀಡಲಾಗಿದೆ.