ಲಕ್ನೋ, ನ. 25 (DaijiworldNews/MB) : ''ತನ್ನ ಇಚ್ಛೆಯ ಸಂಗಾತಿಯ ಆಯ್ಕೆ ಹಾಗೂ ಬದುಕುವ ಹಕ್ಕು ವೈಯಕ್ತಿಕ ಸ್ವಾತಂತ್ರದ ಮೂಲವಾಗಿದೆ. ಸಂವಿಧಾನದ 21ನೇ ವಿಧಿಯಡಿ ಇದನ್ನು ಕೊಡಲಾಗಿದೆ'' ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಅಂತರ್ಧರ್ಮೀಯ ಜೋಡಿಯೊಂದರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಿರುವ ಅಲಹಾಬಾದ್ ಹೈಕೋರ್ಟ್ ಆದೇಶದಲ್ಲಿ ಈ ರೀತಿಯಾಗಿ ಉಲ್ಲೇಖಿಸಿದೆ.
ಅಲಹಾಬಾದ್ ಹೈಕೋರ್ಟ್ ಈ ಹಿಂದೆ 'ಕೇವಲ ವಿವಾಹಕ್ಕಾಗಿ ಮತಾಂತರ ಒಪ್ಪಲಾಗದು' ಎಂದು ಆದೇಶ ನೀಡಿದ್ದ ಬೆನ್ನಲ್ಲೇ ದೇಶದೆಲ್ಲೆಡೆ ಲವ್ ಜಿಹಾದ್ ಬಗ್ಗೆ ತೀವ್ರ ಚರ್ಚೆಗಳು ನಡೆದಿದೆ. ಈ ಆದೇಶದ ಆಧಾರದಲ್ಲಿ ಕೆಲವು ರಾಜ್ಯದಲ್ಲಿ ಅಂತರ್ ಧರ್ಮೀಯ ವಿವಾಹ ತಡೆ ಕಾಯ್ದೆ ಅಥವಾ ಲವ್ ಜಿಹಾದ್ ತಡೆ ಕಾಯ್ದೆಯನ್ನು ಜಾರಿಗೆ ತರುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ಆದೇಶವನ್ನು ಮುಂದಿಟ್ಟುಕೊಂಡು ಉತ್ತರ ಪ್ರದೇಶ ಸರ್ಕಾರ ಹೊಸ ಕಾನೂನು ಜಾರಿಗೆ ತರುವ ಘೋಷಣೆ ಮಾಡಿದ ಬೆನ್ನಲ್ಲೇ ಹರ್ಯಾಣ, ಮಧ್ಯಪ್ರದೇಶ, ಕರ್ನಾಟಕ ಮತ್ತು ಅಸ್ಸಾಂ ಲವ್ ಜಿಹಾದ್ ವಿರುದ್ದ ಕಾನೂನು ರೂಪಿಸಲು ಮುಂದಾಗಿದೆ. ಆದರೆ ಈಗ ಅಲಹಾಬಾದ್ ಹೈಕೋರ್ಟ್ ತಾನು ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ.
ಹಾಗೆಯೇ ಉತ್ತರ ಪ್ರದೇಶದ ಖುಷಿನಗರ್ ಜಿಲ್ಲೆಯ ಪ್ರಿಯಾಂಕಾ ಖಾರ್ವಾರ್ ಹಾಗೂ ಸಲಾಮತ್ ಅಲಿ ಅನ್ಸಾರಿ ಅವರು ತಮ್ಮ ಮೇಲೆ ದಾಖಲಾಗಿರುವ ಎಫ್ಐಆರ್ ರದ್ದತಿಗೆ ಕೋರಿ ಅಲಹಾಬಾದ್ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದು ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ವಿವೇಕ್ ಅಗರ್ವಾಲ್ ಹಾಗೂ ಪಂಕಜ್ ನಖ್ವಿ ಅವರಿದ್ದ ವಿಭಾಗೀಯ ಪೀಠವು 14 ಪುಟಗಳ ಆದೇಶವನ್ನು ನೀಡಿದೆ.
''ವೈಯಕ್ತಿಕ ಸಂಬಂಧಗಳ ನಡುವೆ ಮಧ್ಯಪ್ರವೇಶಿಸುವುದು, ಇಬ್ಬರು ವ್ಯಕ್ತಿಗಳ ನಡುವಿನ ಆಯ್ಕೆಯ ಸ್ವಾತಂತ್ರ್ಯದ ಮೇಲೆ ಗಂಭೀರವಾದ ಅತಿಕ್ರಮಣ. ಅನ್ಸಾರಿ ಯಾವುದೇ ತಪ್ಪು ಮಾಡಿಲ್ಲ. ನಮ್ಮ ಮುಂದೆಯೇ ಕಳೆದೊಂದು ವರ್ಷದಿಂದ ಜೊತೆಯಾಗಿ ಬದುಕಿದ ಇಬ್ಬರು ಇದ್ದಾರೆ. ನಾವು ಅವರನ್ನು ಹಿಂದೂ, ಮುಸ್ಲಿಂ ಎಂದು ನೋಡಲಾರೆವು ಕಳೆದ ಒಂದು ವರ್ಷದಿಂದ ಜೊತೆಯಾಗಿ ಬದುಕಿದ ಇಬ್ಬರು ವಯಸ್ಕರಾಗಿ ನಾವು ಅವರನ್ನು ನೋಡುತ್ತೇವೆ'' ಎಂದು ಉಲ್ಲೇಖಿಸಿದೆ.
ಉತ್ತರ ಪ್ರದೇಶದ ಖುಷಿನಗರ್ ಜಿಲ್ಲೆಯ ಪ್ರಿಯಾಂಕಾ ಖಾರ್ವಾರ್ ಹಾಗೂ ಸಲಾಮತ್ ಅಲಿ ಅನ್ಸಾರಿ ಕಳೆದ ವರ್ಷ ವಿವಾಹವಾಗಿದ್ದು ಪ್ರಿಯಾಂಕಾ ನಂತರದಲ್ಲಿ ಇಸ್ಲಾಂಗೆ ಮತಾಂತರವಾಗಿದ್ದರು. ವಿವಾಹದ ಬಳಿಕ ಪ್ರಿಯಾಂಕ ಅವರ ಪಾಲಕರು ಅನ್ಸಾರಿ ವಿರುದ್ಧ ಅಪಹರಣದ ದೂರು ನೀಡಿದ್ದರು. ಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಲು ಕೋರಿ ಅನ್ಸಾರಿ ಹಾಗೂ ಪ್ರಿಯಾಂಕಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
''ಇನ್ನು ಒಂದೇ ಲಿಂಗದ ಇಬ್ಬರು ಶಾಂತಿಯುತವಾಗಿ ಜೀವಿಸುವ ಹಕ್ಕನ್ನು ಕಾನೂನು ನೀಡುವುದಾದರೆ, ಬೇರೆ ಬೇರೆ ಧರ್ಮ, ಜಾತಿ, ಕುಟುಂಬ, ರಾಜ್ಯದವರು ಕೂಡಾ ಆಗಲಿ ವಯಸ್ಕರು ಜೊತೆಯಾಗಿ ಜೀವಿಸುವುದಕ್ಕೆ ವಿರೋಧ ವ್ಯಕ್ತಪಡಿಸುವಂತಿಲ್ಲ'' ಎಂದು ಹೇಳಿದೆ.