ಬೀದರ್ ,ನ.24 (DaijiworldNews/HR): ಕರ್ನಾಟಕದಲ್ಲಿ ವಾಮ ಮಾರ್ಗದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರಕ್ಕೆ ಈ ಉಪ ಚುನಾವಣೆ ಮೂಲಕ ತಕ್ಕ ಉತ್ತರ ನೀಡಬೇಕು, ಅಧಿಕಾರ ಎನ್ನುವುದು ಎಂದಿಗೂ ಶಾಶ್ವತವಲ್ಲ, ಅದು ನೀರ ಮೇಲಿನ ಗುಳ್ಳೆ ಇದ್ದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಬಸವಕಲ್ಯಾಣ ಉಪ ಚುನಾವಣೆ ಹಿನ್ನಲೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, "ಬಿಜೆಪಿ ಸರ್ಕಾರ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಮನೆಗೊಂದು ನಿಗಮ- ಮಂಡಳಿಗಳನ್ನು ಮಾಡಲಿ. ಕಾಂಗ್ರೆಸ್ ಪಕ್ಷಕ್ಕೆ ಮತದಾರರ ಹೃದಯ ಮತ್ತು ಪ್ರೀತಿಯೇ ಮುಖ್ಯ. ಅದರಿಂದಲೇ ಚುನಾವಣೆಯಲ್ಲಿ ಗೆಲುವು ಸಾಧಿಸಿ ತೋರಿಸುತ್ತೇವೆ ಎಂದರು".
ಇನ್ನು ಬಡವರಿಗೆ ಪಡಿತರ ಅಕ್ಕಿ, ಸಾಲ ಮನ್ನಾದಂಥ ಯೋಜನೆಗಳನ್ನು ಜಾರಿಗೆ ತಂದು ಕಾಂಗ್ರೆಸ್ ಜಾತ್ಯಾತೀತ ಪಕ್ಷ ಎಂಬುದನ್ನು ಅಧಿಕಾರದಲ್ಲಿದ್ದಾಗ ತೋರಿಸಿಕೊಟ್ಟಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಮಾತ್ರ ಎಲ್ಲ ವರ್ಗಕ್ಕೆ ಮಾನ್ಯತೆ ಸಿಕ್ಕಂತಾಗುತ್ತದೆ. ಬಿಜೆಪಿಗೆ ಮತ ಹಾಕಿ ತಪ್ಪು ಮಾಡಿದೇವು ಎಂಬುದನ್ನು ನಾಡಿನ ಜನತೆಗೆ ಈಗ ಮನವರಿಕೆಯಾಗಿದೆ ಎಂದು ಹೇಳಿದ್ದಾರೆ.