ಬೆಂಗಳೂರು, ನ.24 (DaijiworldNews/HR): ಶಿರಾ ಸೋಲಿಗೆ ಡಿ ಕೆ ಶಿವಕುಮಾರ್ ಮತ್ತು ನಿಮ್ಮೊಳಗಿರುವ ವೈಮನಸ್ಸೇ ಕಾರಣ ಹೊರತು ಮತದಾರರಲ್ಲ. ಕೈಲಾಗದವನು ಮೈಪರಚಿಕೊಂಡಂತೆ ಆಗಿದೆ ನಿಮ್ಮ ಸದ್ಯದ ಪರಿಸ್ಥಿತಿ. ದೂರುವುದನ್ನು ಬಿಟ್ಟು ಅವಲೋಕನ ಮಾಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕರ್ನಾಟಕ ಪ್ರತಿಕ್ರಿಯೆ ನೀಡಿದೆ.
ಮತಗಳನ್ನು ಖರೀದಿ ಮಾಡಿ ಬಿಜೆಪಿ ಶಿರಾದಲ್ಲಿ ಗೆಲುವು ಸಾಧಿಸಿದೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ, "ಶಿರಾ ಸೋಲಿಗೆ ಡಿ ಕೆ ಶಿವಕುಮಾರ್ ಮತ್ತು ನಿಮ್ಮೊಳಗಿರುವ ವೈಮನಸ್ಸೇ ಕಾರಣ ಹೊರತು ಮತದಾರರಲ್ಲ. ಕೈಲಾಗದವನು ಮೈಪರಚಿಕೊಂಡಂತೆ ಆಗಿದೆ ನಿಮ್ಮ ಸದ್ಯದ ಪರಿಸ್ಥಿತಿ. ದೂರುವುದನ್ನು ಬಿಟ್ಟು ಅವಲೋಕನ ಮಾಡಿ. ನಿಮ್ಮ ವೈಫಲ್ಯವನ್ನು ಬೇರೆಯವರ ಹೆಗಲ ಮೇಲೆ ಹಾಕಿ ನುಣುಚಿಕೊಳ್ಳುವ ನಿಮ್ಮ ಪ್ರವೃತ್ತಿಯನ್ನು ಎಂದು ಕೊನೆಗಾಣಿಸುತ್ತೀರಿ ಸಿದ್ದರಾಮಯನವರೇ" ಎಂದು ಪ್ರಶ್ನಿಸಿದೆ.
ಇನ್ನು "ಐದು ವರ್ಷ ಮುಖ್ಯಮಂತ್ರಿಯಾಗಿದ್ದ ನೀವು ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತರೂ ಬುದ್ಧಿ ಕಲಿತಿಲ್ಲ. ಮತದಾರರನ್ನು ನಿಂದಿಸುವ ಮಟ್ಟಕ್ಕೆ ನೀವು ಇಳಿದಿರುವುದು ನಿಜಕ್ಕೂ ನಾಚಿಕೆಗೇಡು" ಎಂದು ಹೇಳಿದೆ.