ಬೆಂಗಳೂರು, ನ. 24 (DaijiworldNews/MB) : ''ಕೊರೊನಾ ಲಸಿಕೆ ವಿತರಣೆಗೆ ಸಜ್ಜಾಗಿ. ಚುನಾವಣೆ ಸಂದರ್ಭದಲ್ಲಿ ಬೂತ್ ತಯಾರಿಸುವಂತೆ ಲಸಿಕೆ ವಿತರಣೆಗೆ ಬೂತ್ ರಚಿಸಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ'' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರಧಾನಿಯವರ ಸಭೆಯ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಬೊಮ್ಮಾಯಿಯವರು, ''ಮುಂದಿನ ವರ್ಷ ಕೊರೊನಾ ಲಸಿಕೆಯು ಯಾವ ಹಂತದಲ್ಲಿ ಬಂದರೂ ಲಸಿಕೆ ವಿತರಣೆಗೆ ಎಲ್ಲಾ ಸಿದ್ದತೆ ನಡೆಸಬೇಕು ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಅದರಂತೆ 30 ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತದೆ. 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಕೊರೊನಾ ವಾರಿಯರ್ಸ್ಗಳಿಗೆ ಮತ್ತು 50 ವರ್ಷ ವಯಸ್ಸು ದಾಟಿದ 26 ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತದೆ. ಅದಕ್ಕಾಗಿ ಎಲ್ಲಾ ಸಿದ್ದತೆ ನಡೆಸಲಾಗುವುದು'' ಎಂದು ಹೇಳಿದರು.
''ಕೂಡಲೇ ರಾಜ್ಯಮಟ್ಟದಲ್ಲಿ ಸಂಚಾಲನ ಸಮಿತಿ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆ ರಚಿಸಲು ಪ್ರಧಾನಿ ತಿಳಿಸಿದ್ದಾರೆ. ಲಸಿಕೆಯ ವಿತರಣೆ ಬಗ್ಗೆ ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂ ಸೇವಕರಿಗೆ ತರಬೇತಿ ನೀಡಬೇಕು. ಲಸಿಕೆ ನೀಡಿಕೆಯ ಮಾಹಿತಿಯನ್ನು ಡಿಜಿಟಲ್ ವೇದಿಕೆಯಲ್ಲಿ ಸಂಗ್ರಹಿಸಿಡಲಾಗುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ'' ಎಂದು ಬೊಮ್ಮಾಯಿ ವಿವರಿಸಿದರು.
ಇನ್ನು, ''ಕೇಂದ್ರ ಸರ್ಕಾರದ ಸೂಚನೆಯಂತೆ ಕೊರೊನಾ ಲಸಿಕೆ ವಿತರಿಸಲು ಎಲ್ಲಾ ಸಿದ್ದತೆಗಳು ನಡೆಯುತ್ತಿದ್ದು, ರಾಜ್ಯಾದ್ಯಂತ 29,451 ಲಸಿಕೆ ವಿತರಣೆ ಕೇಂದ್ರಗಳನ್ನು ಗುರುತಿಸಲಾಗಿದೆ'' ಎಂದು ಈಗಾಗಲೇ ಆರೋಗ್ಯ ಸಚಿವ ತಿಳಿಸಿದ್ದಾರೆ.