ಲಕ್ನೋ, ನ. 24 (DaijiworldNews/MB) : 'ಕೇವಲ ವಿವಾಹಕ್ಕಾಗಿ ಮತಾಂತರ ಒಪ್ಪಲಾಗದು' ಎಂದು ಈ ಹಿಂದೆ ಆದೇಶ ನೀಡಿದ್ದ ಅಲಹಾಬಾದ್ ಹೈಕೋರ್ಟ್ ತನ್ನ ಆದೇಶವನ್ನು ತಾನೇ ರದ್ದುಪಡಿಸಿದೆ.
"ಲವ್ ಜಿಹಾದ್" ಅನ್ನು ಅಪರಾಧದ ವ್ಯಾಪ್ತಿಗೆ ತರುವ ಹೊಸ ಕಾನೂನನ್ನು ಜಾರಿಗೆ ತರುವುದಾಗಿ ಇತ್ತೀಚೆಗೆ ಹೇಳಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ್ದರು. ಇದೀಗ ಈ ಆದೇಶವನ್ನೇ ಹೈಕೋರ್ಟ್ ರದ್ದುಗೊಳಿಸಿದೆ.
ಈ ಆದೇಶದ ಆಧಾರದಲ್ಲಿ ಕೆಲವು ರಾಜ್ಯದಲ್ಲಿ ಅಂತರ್ ಧರ್ಮೀಯ ವಿವಾಹ ತಡೆ ಕಾಯ್ದೆ ಅಥವಾ ಲವ್ ಜಿಹಾದ್ ತಡೆ ಕಾಯ್ದೆಯನ್ನು ಜಾರಿಗೆ ತರುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ಆದೇಶವನ್ನು ಮುಂದಿಟ್ಟುಕೊಂಡು ಉತ್ತರ ಪ್ರದೇಶ ಸರ್ಕಾರ ಹೊಸ ಕಾನೂನು ಜಾರಿಗೆ ತರುವ ಘೋಷಣೆ ಮಾಡಿದ ಬೆನ್ನಲ್ಲೇ ಹರ್ಯಾಣ, ಮಧ್ಯಪ್ರದೇಶ, ಕರ್ನಾಟಕ ಮತ್ತು ಅಸ್ಸಾಂ ಲವ್ ಜಿಹಾದ್ ವಿರುದ್ದ ಕಾನೂನು ರೂಪಿಸಲು ಮುಂದಾಗಿದೆ. ಆದರೆ ಈಗ ಅಲಹಾಬಾದ್ ಹೈಕೋರ್ಟ್ ತಾನು ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ.
ಇಲ್ಲಿ ಮತಾಂತರ ಮಾನ್ಯವೇ ಅಲ್ಲವೇ ಎಂಬ ವಿಚಾರ ಬರುವುದಿಲ್ಲ. ಇಬ್ಬರು ವಯಸ್ಕರು ಒಟ್ಟಿಗೆ ವಾಸಿಸುವ ಹಕ್ಕನ್ನು ದೇಶ ಅಥವಾ ಇನ್ಯಾರೂ ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ವಿವಾಹಿತ ದಂಪತಿಗಳು ಪೊಲೀಸ್ ರಕ್ಷಣೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಮಹೇಶ್ ತ್ರಿಪಾಠಿ ಅವರ ನ್ಯಾಯಪೀಠವು ಸೆಪ್ಟೆಂಬರ್ 29 ರಂದು ವಜಾಗೊಳಿಸಿತ್ತು. ಮಹಿಳೆ ಮುಸ್ಲಿಂ ಆಗಿದ್ದು ವಿವಾಹದ ಉದ್ದೇಶದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ ಎಂದು ಹೇಳಿತ್ತು. ಈ ವೇಳೆ ನ್ಯಾಯಾಲಯವು 2014 ರಲ್ಲಿ ಹೊರಡಿಸಿದ ಆದೇಶವನ್ನು ಉಲ್ಲೇಖಿಸಿತ್ತು.
2014ರಲ್ಲಿ ನೂರ್ ಜಹಾನ್ ಎಂಬ ಮಹಿಳೆ ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡ ನಂತರ ವಿವಾಹವಾಗಿದ್ದು ದಂಪತಿಗಳು ಪೋಲೀಸ್ ರಕ್ಷಣೆ ಕೋರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾಗ ಅವರ ಮನವಿಯನ್ನು ಕೋರ್ಟ್ ತಿರಸ್ಕರಿಸಿತ್ತು.