ನವದೆಹಲಿ, ನ. 24 (DaijiworldNews/MB) : ರಾಜ್ಕೋಟ್ ಬಳಿಯ ಕಾರ್ಖಾನೆಯೊಂದರಲ್ಲಿ ದಲಿತ ವ್ಯಕ್ತಿಯೊಬ್ಬರನ್ನು ಥಳಿಸಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ಬಗ್ಗೆ ಉತ್ತರಿಸಲು ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೊನೆಯ ಅವಕಾಶ ನೀಡಿದೆ.
ಆರೋಪಿಗಳಿಗೆ ಜಾಮೀನು ನೀಡಿರುವುದನ್ನು ವಿರೋಧಿಸಿ ಕಳೆದ ವರ್ಷ ಹೈಕೋರ್ಟ್ಗೆ ಮೇನ್ಮನವಿ ಸಲ್ಲಿಸಿರುವ ಬಗ್ಗೆ ರಾಜ್ಯವು ತನ್ನ ಪ್ರತಿ-ಅಫಿಡವಿಟ್ ಅನ್ನು ಏಕೆ ಸಲ್ಲಿಸಲಿಲ್ಲ ಎಂದು ಗುಜರಾತ್ ಸರ್ಕಾರದ ವಕೀಲರನ್ನು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಎಸ್. ರೆಡ್ಡಿ ಹಾಗೂ ಎಂ. ಆರ್ ಶಾ ಅವರನ್ನು ಒಳಗೊಂಡ ಪೀಠವು ಪ್ರಶ್ನಿಸಿದೆ.
2019 ರ ಫೆಬ್ರವರಿಯಲ್ಲಿ ಆರೋಪಿ ತೇಜಸ್ ಕನುಭಾಯ್ ಝಾಲಾ ವಿರುದ್ದ ಸಾಕ್ಷ್ಯಗಳು ಇಲ್ಲದ ಕಾರಣ ಹೈಕೋರ್ಟ್ ಜಾಮೀನು ನೀಡಿತ್ತು. ಕಳೆದ ವರ್ಷ ನವೆಂಬರ್ನಲ್ಲಿ ಈ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯವು ನೋಟಿಸ್ ನೀಡಿತ್ತು.
ಝಾಲಾ ಮತ್ತು ಇತರ ನಾಲ್ವರು 35 ವರ್ಷದ ದಲಿತ ಮುಖೇಶ್ ವನಿಯಾ ಅವರನ್ನು ಪೈಪ್ ಮತ್ತು ಬೆಲ್ಟ್ನಿಂದ ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದರು.
ಈ ಬಗ್ಗೆ ರಾಜ್ಯ ಸರ್ಕಾರ ಯಾಕೆ ಪ್ರತಿಕ್ರಿಯಿಸಿಲ್ಲ ಎಂದು ನ್ಯಾಯಪೀಠ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದು ಸರ್ಕಾರದ ಇಂತಹ ನಡೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದೆ. ಈ ವಿಚಾರ ಮಾತ್ರವಲ್ಲದೇ ಬೇರೆ ವಿಚಾರದಲ್ಲೂ ಸರ್ಕಾರ ಯಾವುದೇ ಅಫಿಡವೀಟ್ ಸಲ್ಲಿಸುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್, ಘಟನೆಯ ವಿವರವನ್ನು ನೀಡಿ, ನ್ಯಾಯಪೀಠದ ಮುಂದೆ ವೈದ್ಯಕೀಯ ವರದಿಯನ್ನು ಉಲ್ಲೇಖಿಸಿದರು.
ಕಾರ್ಖಾನೆಯ ಮಾಲೀಕ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು 2018 ರ ಮೇ ತಿಂಗಳಲ್ಲಿ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಬಂಧಿಸಿದ್ದರು. ದಲಿತ ಯುವಕನಿಗೆ ಹಲ್ಲೆ ನಡೆಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಯುವಕನನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲೇ ಆತ ಸಾವನ್ನಪ್ಪಿದ್ದ. ಈ ಬಗ್ಗೆ ಯುವಕನ ಪತ್ನಿ ಪೊಲೀದರಿಗೆ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪ್ರತಿ-ಅಫಿಡವಿಟ್ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಒಂದು ವಾರದ ಸಮಯವನ್ನು, ಕೊನೆಯ ಅವಕಾಶವಾಗಿ ನೀಡಿದ್ದು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.