ಬೆಂಗಳೂರು, ನ. 24 (DaijiworldNews/MB) : ''ರಾಜ್ಯ ಬಿಜೆಪಿ ಸರ್ಕಾರ ವಿದ್ಯುತ್ ಖರೀದಿಯಲ್ಲಿ 3400 ಕೋಟಿ ಹಗರಣ ನಡೆಸಿದೆ'' ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆರೋಪಿಸಿದ್ದಾರೆ.
ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ಕಳೆದ 10 ವರ್ಷಗಳಲ್ಲಿ ವಿದ್ಯುತ್ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರದ ಕುರಿತು ನ್ಯಾಯಾಂಗ ತನಿಖೆ ಆಗಬೇಕು'' ಎಂದು ಆಗ್ರಹಿಸಿದರು.
''ಉಡುಪಿ ವಿದ್ಯುತ್ ಸ್ಥಾವರ 2010 ರಲ್ಲಿ 600 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. 2014ರಲ್ಲಿ ಇದನ್ನು ಅದಾನಿ ಪವರ್ ಖರೀದಿಸಿದ್ದು ಪ್ರಸ್ತುತ ವಿದ್ಯುತ್ ಸ್ಥಾವರವು 2000 ಮೆಗಾವಾಟ್ ಸಾಮರ್ಥ್ಯ ಹೊಂದಿದೆ. ಅದರಲ್ಲಿ 1800 ಮೆಗಾವಾಟ್ ಅನ್ನು ಸರ್ಕಾರ ಖರೀದಿಸುತ್ತಿದೆ. ಅದಾನಿ ಪವರ್ ಒಡೆತನದ ಯುಪಿಸಿಎಲ್ ಎರಡು ವರ್ಷಗಳಲ್ಲಿ ವಿದ್ಯುತ್ ಖರೀದಿ ಬೆಲೆಯಲ್ಲಿ ಶೇ 42 ಹೆಚ್ಚಳ ಮಾಡಿ ರಾಜ್ಯ ಸರ್ಕಾರಕ್ಕೆ ಮಾರಾಟ ಮಾಡಿದೆ. ಅದಾನಿ ಕಂಪನಿಯಿಂದ 2019ರಲ್ಲಿ ವಿದ್ಯುತ್ ಖರೀದಿಸಿದ ಒಟ್ಟು ಬಿಲ್ 1224 ಕೋಟಿ. ಆದರೆ ಸಾರ್ಕರವು ಎಪಿಪಿಸಿ ಬೆಲೆಗೆ ಹೋಲಿಸಿದರೆ 563 ಕೋಟಿಗಳಷ್ಟು ಹೆಚ್ಚು ಪಾವತಿಸಿದೆ. ರಾಜ್ಯ ಸರ್ಕಾರ ಹೆಚ್ಚಿನ ದರದಲ್ಲಿ ವಿದ್ಯುತ್ ಖರೀದಿ ಮಾಡಿದ ಈ ಎರಡು ವರ್ಷದಲ್ಲಿ ಕಲ್ಲಿದ್ದಲಿನ ಬೆಲೆ ಶೇ. 40ರಷ್ಟು ಕಡಿಮೆಯಾಗಿದೆ. ಸರ್ಕಾರವು ಅದಾನಿ ಕಂಪನಿಗೆ ಹೆಚ್ಚಿನ ಲಾಭ ಮಾಡಿಕೊಟ್ಟಿದೆ'' ಎಂದು ಆರೋಪಿಸಿದರು.