ಚೆನ್ನೈ, ನ. 24 (DaijiworldNews/MB) : ಶೀಘ್ರದಲ್ಲೇ ತಮಿಳುನಾಡಿಗೆ ಈ ವರ್ಷದ ಈಶಾನ್ಯ ಮಾನ್ಸೂನ್ನ ಮೊದಲ ಚಂಡಮಾರುತ 'ನಿವಾರ್' ಅಪ್ಪಳಿಸುವ ಸಾಧ್ಯತೆಯಿದ್ದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಸಾಂದರ್ಭಿಕ ಚಿತ್ರ
ಮುಂಗಾರು ಅವಧಿ ಅಂತ್ಯದ ನಂತರವೂ ಸತತ ವಾಯುಭಾರ ಕುಸಿತ ಸಂಭವಿಸಿದೆ. ಇದರಿಂದಾಗಿ ಚಂಡಮಾರುತ ಅಪ್ಪಳಿಸುವ ಭೀತಿ ಉಂಟಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮುಂತಾದೆಡೆ ನಿರಂತರ ಮಳೆಯಾಗುತ್ತಿದೆ.
ಈಗ ಬಂಗಾಳ ಕೊಲ್ಲಿಯಲ್ಲಿ ನಿವಾರ್ ಚಂಡಮಾರುತ ಸೃಷ್ಟಿಯಾಗುತ್ತಿದ್ದು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಅನೇಕ ಕಡೆ ಭಾರೀ ಮಳೆಯಾಗುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಿವಾರ್ ಚಂಡಮಾರುತವು ಪ್ರಸ್ತುತ ಶ್ರೀಲಂಕಾದ ಉತ್ತರ ಭಾಗ ಮತ್ತು ದಕ್ಷಿಣ ತಮಿಳುನಾಡು ಕರಾವಳಿಯತ್ತ ಪಶ್ಚಿಮದಿಂದ ಚಲಿಸುತ್ತಿದೆ ಎಂದು ವರದಿಯಾಗಿದ್ದು ಈ ಕಾರಣದಿಂದಾಗಿ ನವೆಂಬರ್ 26ರವರೆಗೆ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಮಹಾಬಲಿಪುರಂ ಮತ್ತು ಕಾರೈಕಲ್ನಲ್ಲಿ ಭೂಕುಸಿತವನ್ನು ಉಂಟುಮಾಡುವ ಸಾಧ್ಯತೆಯಿದೆ.
ಇನ್ನು ತಮಿಳುನಾಡಿಗೆ ಬುಧವಾರ ನಿವಾರ್ ಅಪ್ಪಳಿಸಲಿದ್ದು ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ನಿವಾರ್ ಚಂಡಮಾರುತದ ಪರಿಣಾಮ ತಮಿಳುನಾಡು ಮಾತ್ರವಲ್ಲದೇ ನೆರೆಯ ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಕೆಲ ಭಾಗದಲ್ಲಿಯೂ ಉಂಟಾಗಲಿದೆ ಎಂದು ಇಲಾಖೆ ತಿಳಿಸಿದೆ.
ಭಾರೀ ಮಳೆಯ ನಿರೀಕ್ಷೆಯಿರುವುದರಿಂದ ಈಗಾಗಲೇ ತಮಿಳುನಾಡಿನಲ್ಲಿ ಜನರನ್ನು ಸುರಕ್ಷತಾ ಪ್ರದೇಶಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಹಾಗೆಯೇ ಮೀನುಗಾರಿಕೆ ನಡೆಸದಂತೆ ಸ್ಥಳೀಯ ಜಿಲ್ಲಾಡಳಿತಗಳು ಮೀನುಗಾರರಿಗೆ ಎಚ್ಚರಿಕೆ ನೀಡಿದೆ.