ಮುಂಬೈ, ನ. 24 (DaijiworldNews/MB) : ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ, ನಟಿ ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೋಲಿ ಚಾಂಡೆಲ್ ಬಾಂಬೆ ಹೈಕೋರ್ಟ್ ಕದ ತಟ್ಟಿದ್ದಾರೆ.
ಕಂಗನಾ ಮತ್ತು ಅವರ ಸಹೋದರಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿವಾದಾತ್ಮಕ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಯತ್ನವಾಗಿದೆ ಎಂದು ಕಂಗನಾ ಮತ್ತು ಅವರ ಸಹೋದರಿ ವಿರುದ್ದ ಎಫ್ಐಆರ್ ದಾಖಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿ ಕಳೆದ ಅಕ್ಟೋಬರ್ 26 ಮತ್ತು 27ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಆದರೆ ಇಬ್ಬರೂ ಕೂಡಾ ಬೇರೆ ಕಾರಣವನ್ನು ಹೇಳಿ ವಿಚಾರಣೆಗೆ ಹಾಜರಾಗಿರಲಿಲ್ಲ.
ಆ ಬಳಿಕ ನವೆಂಬರ್ 9 ಮತ್ತು 10ರಂದು ವಿಚಾರಣೆಗೆ ಹಾಜರಾಗುವಂತೆ ಮತ್ತೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಆದರೆ ಎರಡನೇ ಬಾರಿಯ ಸಮನ್ಸ್ಗೂ ಸೋದರಿಯರು ಕಿಮ್ಮತ್ತು ಕೊಡದೆ ವಿಚಾರಣೆಗೆ ಹಾಜರಾಗಿಲ್ಲ. ನವೆಂಬರ್ 15 ರವರೆಗೆ ಹಿಮಾಚಲ ಪ್ರದೇಶದಲ್ಲಿ ತಮ್ಮ ಸಹೋದರನ ವಿವಾಹದಲ್ಲಿ ಪಾಲ್ಗೊಳ್ಳಬೇಕಿದೆ ಎಂದು ವಕೀಲರ ಮೂಲಕ ತಿಳಿಸಿದ್ದರು.
ಮತ್ತೆ ಮೂರನೇ ಬಾರಿಗೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿ ನವೆಂಬರ್ 23 ಮತ್ತು 24ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಈಗ ಈ ಸಹೋದರಿಯರು ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮಟ್ಟಿಲೇರಿದ್ದಾರೆ.