ತುಮಕೂರು, ನ. 24 (DaijiworldNews/MB) : ''ಒಕ್ಕಲಿಗ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಲೇಬೇಕು. ಸರ್ಕಾರವು ಒಕ್ಕಲಿಗ ಅಭಿವೃದ್ಧಿ ನಿಗಮವನ್ನು ರಚಿಸಲಿದೆ'' ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಆನ್ಲೈನ್ ತರಗತಿಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಮರಾಠಿ ಭಾಷೆಗೆ ಮಂಡಳಿ ರಚನೆಯಾಗುತ್ತದೆ ಎಂದಾದರೆ, ಒಕ್ಕಲಿಗರಿಗೂ ಅಭಿವೃದ್ಧಿ ಮಂಡಳಿ ರಚಿಸಲೇಬೇಕು'' ಎಂದು ಹೇಳಿದರು.
''ಯಾವುದೇ ಜಾತಿಯ ಅಭಿವೃದ್ದಿ ನಿಗಮ ರಚನೆಯಾಗುವುದು ಸಹಜ, ಆ ಸಂದರ್ಭದಲ್ಲಿ ಬೇರೆ ಸಮುದಾಯಗಳೂ ತಮ್ಮ ಜಾತಿಯ ಅಭಿವೃದ್ದಿ ನಿಗಮ ರಚನಗೆ ಒತ್ತಾಯಿಸುವುದು ಸಹಜ'' ಎಂದು ಹೇಳಿದ ಅವರು, ''ಅಭಿವೃದ್ದಿ ನಿಗಮಗಳ ರಚನೆ ವಿಚಾರದಲ್ಲಿ ಸರ್ಕಾರವು ಜನರ ಭಾವನೆಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ'' ಎಂದರು.
ಮರಾಠಿ ಅಭಿವೃದ್ದಿ ನಿಗಮದ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು, ''ರಾಜ್ಯದ ಅಭಿವೃದ್ಧಿಗೆ ಹಣ ಸಂಗ್ರಹ ಆಗುತ್ತಿರುವುದು ಬೆಂಗಳೂರಿನ ಒಕ್ಕಲಿಗ ಸಮಾಜದಿಂದ ಹಾಗಾಗಿ ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಪ್ರಾಧಿಕಾರವನ್ನೇಕೆ ರಚನೆ ಮಾಡಲಿಲ್ಲ'' ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.