ಬೆಂಗಳೂರು, ನ. 24 (DaijiworldNews/MB) : ''ಈ ವರ್ಷವನ್ನು 'ಶೈಕ್ಷಣಿಕ ಶೂನ್ಯ ಕಲಿಕಾ ವರ್ಷ' ಎಂದು ಘೋಷಿಸಿಲ್ಲ. ಸದ್ಯಕ್ಕೆ ಸರ್ಕಾರದ ಎದುರು ಅಂತಹ ಯಾವ ಪ್ರಸ್ತಾವವೂ ಇಲ್ಲ'' ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
''ಎಲ್ಲಾ ಮಕ್ಕಳಿಗೆ ಪಠ್ಯ ಪುಸ್ತಕಗಳು ಪೂರೈಸಲಾಗಿದೆ. ಎಲ್ಲಾ ಮಕ್ಕಳು ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಪರ್ಯಾಯ ಕಲಿಕಾ ಕ್ರಮಗಳಿಗೆ ಚಾಲನೆ ನೀಡಲಾಗಿದೆ. ಅಷ್ಟೇ ಅಲ್ಲದೇ ಶಿಕ್ಷಕರು ಶಾಲೆಗೆ ಹಾಜರಾಗಿ ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಪರಾಮರ್ಶೆ ನಡೆಸುತ್ತಿದ್ದಾರೆ. ಅವರ ಈ ಜವಾಬ್ದಾರಿ ಮಕ್ಕಳ ಕಲಿಕೆಗೆ ಪ್ರೇರಣೆ ನೀಡಲಿದೆ'' ಎಂದು ಹೇಳಿದರು.
''ಇನ್ನು ಕೆಲವು ಖಾಸಗಿ ಶಾಲೆಗಳು ಕೈಗೊಳ್ಳುವ ಪರ್ಯಾಯ ಕ್ರಮಗಳು ಕೂಡಾ ಕಲಿಕೆಗೆ ಪ್ರೇರಣೆಯಾಗಿದೆ. ಯಾವ ವಿದ್ಯಾರ್ಥಿಯು ಕಲಿಕೆಯಿಂದ ವಂಚನೆಗೆ ಒಳಗಾಗದಿರುವ ಕಾರಣ ಈ ವರ್ಷವನ್ನು ನಾವು 'ಶೈಕ್ಷಣಿಕ ಶೂನ್ಯ ಕಲಿಕಾ ವರ್ಷ' ಎಂದು ಘೋಷಿಸಲು ಸಾಧ್ಯವಿಲ್ಲ. ಈ ಪದಗಳು ಇತ್ತೀಚೆಗೆ ಹುಟ್ಟಿಕೊಂಡು ಗೊಂದಲ ಸೃಷ್ಟಿಸಿದೆ'' ಎಂದು ಸ್ಪಷ್ಟಪಡಿಸಿದರು.