ಪಾಟ್ನಾ, ನ. 24 (DaijiworldNews/MB) : ಎಐಎಂಐಎಂ ಶಾಸಕರೊಬ್ಬರು 'ಹಿಂದೂಸ್ತಾನ' ಪದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿ, ಭಾರತ 'ಭಾರತ' ಪದ ಬಳಸಬೇಕೆಂದು ಒತ್ತಾಯಿಸಿದ್ದು ಇದು ವಿವಾದಕ್ಕೆ ಕಾರಣವಾಗಿದೆ.
ಬಿಹಾರದಲ್ಲಿ ವಿಧಾನ ಸಭೆಯ ಮೊದಲ ಅಧಿವೇಶನ ಸೋಮವಾರ ನಡೆದಿದ್ದು ನೂತನ ಸದಸ್ಯರಿಗೆ ಪ್ರಮಾಣ ವಚನ ಭೋದಿಸಲಾಗಿದೆ. ಈ ಸಂದರ್ಭ 'ಹಿಂದೂಸ್ತಾನ' ಪದ ಬಳಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎಐಎಂಐಎಂ ಶಾಸಕ 'ಹಿಂದೂಸ್ತಾನ' ಬದಲಿಗೆ 'ಭಾರತ' ಪದ ಬಳಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ 'ಭಾರತ' ಎಂಬ ಪದವನ್ನು ಹಾಗೆಯೇ ಬಳಸಬೇಕಿತ್ತು. ಆದರೆ, ಹಿಂದೂಸ್ತಾನ ಎಂದು ಹೇಳಿದ್ದಾರೆ. ಈ ಪದ ಬಳಕೆಯಿಂದ ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ನಾನು ಉರ್ದು ಮಾತನಾಡುವ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದೇನೆ. ನಾವು ಸಂವಿಧಾನದ ಪ್ರಕಾರವಾಗಿ ಪ್ರಮಾಣವಚನ ಸ್ವೀಕಾರ ಮಾಡುವಾಗ ಸಂವಿಧಾನದಲ್ಲಿ ಎಲ್ಲೆಡೆ 'ಭಾರತ' ಎಂದು ಉಲ್ಲೇಖಿಸಲಾಗಿದೆ. ಆದರೆ ಇಂದು ಇಲ್ಲಿ ಪ್ರಮಾಣವಚನ ಸ್ವೀಕಾರ ಮಾಡುವಾಗ 'ಹಿಂದೂಸ್ತಾನ' ಎಂದು ಹೇಳಬೇಕೇ ಅಥವಾ 'ಭಾರತ' ಎಂದು ಹೇಳಬೇಕೇ ಎಂಬುದನ್ನು ನಾನು ತಿಳಿಯಬೇಕು. ನಾವು ಶಾಸಕರು, ನಾವು ಸಂವಿಧಾನಕ್ಕೆ ಆದ್ಯತೆ ನೀಡಬೇಕು ಎಂದು ಎಐಎಂಐಎಂನ ಬಿಹಾರದ ಅಧ್ಯಕ್ಷ ಅಖ್ತರುಲ್ ಇಮಾಮ್ ಹೇಳಿದರು.
ಕೊನೆಗೆ ಹಂಗಾಮಿ ಸ್ವೀಕರ್ ಜಿತನ್ ರಾಮ್ ಮಾಂಝಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ 'ಭಾರತ' ಪದ ಬಳಸಲು ಇಮಾಮ್ಗೆ ಅವಕಾಶ ನೀಡಿದರು.
ಆದರೆ ಎಐಎಂಐಎಂ ಶಾಸಕರ ಈ ವರ್ತನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಆಡಳಿತದಲ್ಲಿರುವ ಬಿಜೆಪಿ-ಜೆಡಿಯು ಮೈತ್ರಿಕೂಟ, ಎಐಎಂಐಎಂ ಶಾಸಕರು ಸುಖಾಸುಮ್ಮನೇ ವಿವಾದ ಸೃಷ್ಟಿಸುತ್ತಿದ್ದಾರೆ. 'ಹಿಂದೂಸ್ತಾನ' ಸಾಮಾನ್ಯವಾಗಿ ಬಳಸುವ ಪದ. 'ಹಿಂದೂಸ್ತಾನ' ಪದವನ್ನು ಬಳಸಲು ಆಗದವರು ಪಾಕಿಸ್ತಾನಕಕ್ಕೆ ಹೋಗಲಿ ಎಂದು ಕಿಡಿಕಾರಿದರು.