ವಿರಾಯ್ಪುರ, ನ.23 (DaijiworldNews/PY): ಕಂಕರ್ ಜಿಲ್ಲೆಯ ತಡೋಕಿಯಲ್ಲಿ ಭದ್ರತಾ ಪಡೆ ಹಾಗೂ ಮಾವೋವಾದಿಗಳ ನಡುವೆ ಸೋಮವಾರ ನಡೆದ ಗುಂಡಿನ ಕಾಳಗದಲ್ಲಿ ನಿಷೇಧಿತ ಸಿಪಿಐ ಮಹಿಳಾ ಹೋರಾಟಗಾರ್ತಿ ಸೇರಿ ಮೂವರು ನಕ್ಸಲರು ಸಾವನ್ನಪ್ಪಿದ್ದಾರೆ.
ಸಾಂದರ್ಭಿಕ ಚಿತ್ರ
ಸಶಸ್ತ್ರ ಸೀಮಾ ಬಲದ ಯೋಧರು, ರೌಘಾಟ್ ಕಬ್ಬಿಣದ ಅದಿರು ಯೋಜನೆಗಾಗಿ ನಡೆಯುತ್ತಿರುವ ರೈಲ್ವೆ ಮಾರ್ಗದ ಕಾಮಾಗಾರಿಗೆ ಭದ್ರತೆ ನೀಡುತ್ತಿದ್ದು, ಪ್ರತಿನಿತ್ಯದಂತೆ ಗಸ್ತು ತಿರುಗುತ್ತಿದ್ದರು. ಈ ಸಂದರ್ಭ ಭದ್ರತಾ ಸಿಬ್ಬಂದಿಗಳ ಮೇಲೆ ನಕ್ಸಲರು ಏಕಾಏಕಿ ಗುಂಡಿನದಾಳಿ ನಡೆಸಿದ್ದಾರೆ. ನಕ್ಸಲರ ದಾಳಿಗೆ ಪ್ರತಿ ದಾಳಿ ನಡೆಸಿದ ಯೋಧರು ಮೂವರು ಮಾವೋವಾದಿಗಳನ್ನು ಸದೆಬಡೆದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಇನ್ಸ್ಪೆಕ್ಟರ್ ಜನರಲ್ ಸುಂದರರಾಜ್ ಪಿ ಅವರು, "ಎನ್ಕೌಂಟರ್ ಸ್ಥಳದಿಂದ ಮಹಿಳಾ ಮಾವೋವಾದಿ ಸೇರಿ ಮೂವರನ್ನು ವಶಪಡಿಸಿಕೊಳ್ಳಲಾಗಿದೆ. ಶವಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ" ಎಂದು ಹೇಳಿದ್ದಾರೆ.
"ಗುಂಡಿನ ದಾಳಿಯ ನಡುವೆ ಓರ್ವ ಎಸ್ಎಸ್ಬಿ ಹೆಡ್ ಕಾನ್ಸ್ಟೆಬಲ್ ಅಮನ್ ಕುಮಾರ್ ಅವರು ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಚೇತರಿಸಿಕೊಂಡಿದ್ದಾರೆ" ಎಂದು ತಿಳಿಸಿದ್ದಾರೆ.