ಬೆಂಗಳೂರು, ನ.23 (DaijiworldNews/PY): ವಿಧಾನಸಭೆಗೆ ಆರ್.ಆರ್.ನಗರ ಕ್ಷೇತ್ರದಿಂದ ಆಯ್ಕೆಯಾದ ಮುನಿರತ್ನ ಹಾಗೂ ಶಿರಾ ಕ್ಷೇತ್ರದಿಂದ ಆಯ್ಕೆಯಾದ ರಾಜೇಶ್ ಗೌಡ ಅವರು ನ.23ರ ಸೋಮವಾರದಂದು ಪ್ರಮಾಣ ವಚನ ಸ್ವೀಕರಿಸಿದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಮ್ಮುಖದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುನಿರತ್ನ ಹಾಗೂ ರಾಜೇಶ್ ಗೌಡ ಅವೆಉ ಪ್ರಮಾಣ ವಚನ ಸ್ವೀಕರಿಸಿದರು.
ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಆರ್.ಆರ್ನಗರ ಕ್ಷೇತ್ರದಲ್ಲಿ 58 ಸಾವಿರ ಮತಗಳಿಂದ ಮುನಿರತ್ನ ಅವರು ಜಯಗಳಿಸಿದ್ದು, ಶಿರಾ ಕ್ಷೇತ್ರದಲ್ಲಿ ರಾಜೇಶ್ ಗೌಡ ಅವರು 13 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದರು.
ಈ ಸಂದರ್ಭ ಮಾತನಾಡಿದ ಮುನಿರತ್ನ ಅವರು, "ಸಿಎಂ ಅವರು ಯಾವ ಖಾತೆ ಕೊಟ್ಟರೂ ಕೂಡಾ ಅದನ್ನು ನಾವು ನಿಭಾಯಿಸುತ್ತೇವೆ. ನಮ್ಮ ನಾಯಕರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾವು ಬದ್ಧ. ಸಚಿವ ಸ್ಥಾನ ನೀಡುವುದು ಸಿಎಂ ಅವರಿಗೆ ಹಾಗೂ ಹೈಕಮಾಂಡ್ಗೆ ಬಿಟ್ಟ ವಿಷಯ" ಎಂದಿದ್ದಾರೆ.
ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಂಸದ ಡಿ.ಕೆ.ಸುರೇಶ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಅವರು ಲೋಕಸಭೆಯಲ್ಲಿ 2.5 ಲಕ್ಷ ಮತಗಳಿಂದ ಗೆದ್ದಾಗ ಇವಿಎಂ ಮೇಲೆ ಅನುಮಾನವಿರಲಿಲ್ಲ. ವಿಧಾನಸಭೆ ಉಪಚುನಾವಣೆಯಲ್ಲಿ ನಾನು ಗೆದ್ದಾಗ ಅವರಿಗೆ ಸಂಶಯ. ಹಾಗಾದರೆ, ಅವರು ಗೆದ್ದಾಗ ಇದೇ ರೀತಿಯಾದ ಅನುಮಾನ ಬಂದಿದ್ದಾರೆ ಒಪ್ಪಬಹುದಿತ್ತು" ಎಂದು ತಿಳಿಸಿದ್ದಾರೆ.