ಬೆಂಗಳೂರು, ನ.23 (DaijiworldNews/PY): "ಶಾಲಾ-ಕಾಲೇಜುಗಳನ್ನು ಡಿಸೆಂಬರ್ ಅಂತ್ಯದವರೆಗೆ ಆರಂಭ ಮಾಡುವುದಿಲ್ಲ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಶಾಲಾರಂಭದ ವಿಚಾರವಾಗಿ ಶಿಕ್ಷಣ ಸೇರಿದಂತೆ ಆರೋಗ್ಯ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, "ಶಿಕ್ಷಣ ಆರೋಗ್ಯ ಸೇರಿದಂತೆ ಶಿಕ್ಷಣ ತಜ್ಞರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಚರ್ಚೆ ನಡೆಸಲಾಯಿತು" ಎಂದು ತಿಳಿಸಿದರು.
"ಡಿಸೆಂಬರ್ ಅಂತ್ಯದ ವೇಳೆ ಇನ್ನೊಮ್ಮೆ ಸಭೆ ಸೇರಿ ಚರ್ಚೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಯಾವುದೇ ಸಂದರ್ಭದಲ್ಲೂ ಕೂಡಾ ಕೊರೊನಾ ಹೆಚ್ಚಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ. ಶಾಲೆಗಳನ್ನು ಪ್ರಾರಂಭ ಮಾಡಿದಲ್ಲಿ ಮಕ್ಕಳ ಆರೋಗ್ಯಕ್ಕೆ ತೊಂದರೆ ಉಂಟಾಗಬಹುದು. ಈ ಹಿನ್ನೆಲೆ ಸಭೆಯಲ್ಲಿ ಈ ವಿಚಾರದ ಬಗ್ಗೆ ಒಮ್ಮತವಾದ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ಹೇಳಿದರು.