ರಾಯಚೂರು,ನ.23 (DaijiworldNews/HR): ರೋಶನ್ ಬೇಗ್ ಅವರು ಕಾಂಗ್ರೆಸ್ ಪಕ್ಷದಲ್ಲಿಲ್ಲ, ಅವರಿಗೂ ನಮಗೂ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಶನ್ ಬೇಗ್ ಅವರು ನಮ್ಮ ಪಕ್ಷದಲ್ಲಿಲ್ಲ, ಹಾಗಾಗಿ ನಮಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದರು.
ಇನ್ನು ಐಎಂಎ ಹಗರಣದಲ್ಲಿ ಜಮೀರ್ ಅಹ್ಮದ್ ಭಾಗಿಯಾದ ಆರೋಪದಡಿಯಲ್ಲಿ ಅವರನ್ನು ಕರೆಸಿ ಸಿಸಿಬಿ ವಿಚಾರಣೆ ಮಾಡಿದೆ. ಈಗಾಗಲೇ ಎರಡು ಮೂರು ಬಾರಿ ಜಮೀರ್ ವಿಚಾರಣೆಗೆ ಹಾಜರಾಗಿದ್ದು ತಮ್ಮದೇನು ಪಾತ್ರವಿಲ್ಲ ಎಂದು ಹೇಳಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಕಾಂಗ್ರೆಸ್ನಲ್ಲಿ ನಾಯಕತ್ವದ ಗೊಂದಲವಿದೆ ಎಂದು ಹೇಳಿಕೆ ನೀಡಿದ್ದು, ಈ ಹೇಳಿಕೆ ಬರೀ ಸುಳ್ಳು. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ ಎಂದು ಹೇಳಿದ್ದಾರೆ.