ಮುಂಬೈ, ನ.23 (DaijiworldNews/HR): ಬಿಜೆಪಿಯು ಅಖಂಡ ಭಾರತದಲ್ಲಿ ನಂಬಿಕೆ ಇಟ್ಟಿದ್ದು, ಮುಂದೊಂದು ದಿನ ಕರಾಚಿಯು ಭಾರತ ಭಾಗವಾಗಲಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ದೇವೇಂದ್ರ ಪಡ್ನವಿಸ್ ಹೇಳಿದ್ದಾರೆ.
ಬಾಂದ್ರಾದಲ್ಲಿರುವ 'ಕರಾಚಿ' ಸಿಹಿ ತಿನಿಸು ಮಳಿಗೆಗಳ ಹೆಸರು ಬದಲಿಸುವಂತೆ ಶಿವಸೇನಾ ಮುಖಂಡ ಅಂಗಡಿ ಮಾಲೀಕರನ್ನು ಒತ್ತಾಯಿಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪಡ್ನವಿಸ್, ಅಖಂಡ ಭಾರತದಲ್ಲಿ ನಮಗೆ ನಂಬಿಕೆ ಇದೆ. ಕರಾಚಿಯು ಮುಂದೊಂದು ದಿನ ಭಾರತದ ಭಾಗವಾಗಲಿದೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನಾ ಸಂಸದ ಸಂಜಯ್ ರಾವತ್, ಮೊದಲಿಗೆ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರವನ್ನು ತನ್ನಿ. ನಂತರ ನಾವು ಕರಾಚಿ ಹೋಗಬಹುದು ಎಂದು ಹೇಳಿದ್ದಾರೆ.
ಇನ್ನು ಶಿವಸೇನಾ ಮುಖಂಡ ನಿತಿನ್ ಮಧುಕರ್ ನಂದಗಾವಂಕರ್ ಅವರು ಕರಾಚಿ ಸಿಹಿ ತಿನಿಸು ಮಳಿಗೆಯ ಮಾಲೀಕರಿಗೆ ಮಳಿಗೆಯ ಹೆಸರು ಬದಲಿಸುವಂತೆ ಒತ್ತಾಯಿಸಿರುವ ವಿಡಿಯೊ ಇತ್ತೀಚೆಗಷ್ಟೇ ವೈರಲ್ ಆಗಿತ್ತು.