ಬೆಂಗಳೂರು, ನ.23 (DaijiworldNews/PY): "ಕೊರೊನಾ ಹಿನ್ನೆಲೆ ಡಿಸೆಂಬರ್ನಲ್ಲಿ ಶಾಲಾರಂಭ ಮಾಡುವುದು ಸೂಕ್ತವಲ್ಲ" ಎಂದು ರಾಜ್ಯ ಸರ್ಕಾರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೊರೊನಾ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ.
ಸಾಂದರ್ಭಿಕ ಚಿತ್ರ
ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಅವರು, "ಡಿಸೆಂಬರ್ ತಿಂಗಳಿನಲ್ಲಿ ಶಾಲಾರಂಭ ಮಾಡುವುದು ಸೂಕ್ತವಲ್ಲ" ಎಂದು ತಿಳಿಸಿದ್ದಾರೆ.
"ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರ ಸೂಚನೆಯ ಮೇರಗೆ ಹೆಚ್ಚು ಕೊರೊನಾ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಆಸ್ಪತ್ರೆಗಳಲ್ಲಿಯೂ ಕೂಡಾ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ. ಕಳೆದ ಎಂಟು ತಿಂಗಳಿನಿಂದ ತೆಗೆದುಕೊಂಡ ಹಲವು ಕ್ರಮಗಳಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಗುಜರಾತ್ ಸೇರಿದಂತೆ ಹರಿಯಾಣ ಹಾಗೂ ದೆಹಲಿ ಮೊದಲಾದ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚು ವ್ಯಾಪಿಸುತ್ತಿದೆ ಎಂದು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ" ಎಂದು ತಿಳಿದುಬಂದಿದೆ.
ಚಳಿಗಾಲ ಕೂಡಾ ಪ್ರಾರಂಭವಾಗಿರುವ ಹಿನ್ನೆಲೆ ಕೊರೊನಾ ಸೋಂಕು ವ್ಯಾಪಿಸುವುದು ಹಾಗೂ ಶ್ವಾಸಕೋಶ ಸಂಬಂಧಿತ ರೋಗಗಳು ಹೆಚ್ಚು ಬಾಧಿಸುತ್ತವೆ ಎನ್ನಲಾಗಿದೆ. ಇನ್ನು ಸೆಪ್ಟೆಂಬರ್ನಲ್ಲಿ ನಡೆಸಿದ ಸರ್ವೆಯ ಪ್ರಕಾರ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸೋಂಕು ಅಧಿಕವಾಗುವ ಸಾಧ್ಯತೆಗಳು ಇವೆ. ಇವೆಲ್ಲದರ ಹಿನ್ನೆಲೆ ಡಿಸೆಂಬರ್ನಲ್ಲಿ ಶಾಲಾರಂಭ ಮಾಡುವುದು ಉತ್ತಮವಲ್ಲ ಎನ್ನುವ ಅಭಿಪ್ರಾಯವನ್ನು ಸರ್ಕಾರಕ್ಕೆ ಶಿಫಾರಸು ಮಾಡಿದೆ.