ಕೊಪ್ಪಳ, ನ.23 (DaijiworldNews/PY): "ಸಿಎಂ ಅವರಿಗೆ ತಮ್ಮ ಸರ್ಕಾರ ಉಳಿಸಿಕೊಳ್ಳುವುದು ಮಾತ್ರ ಮುಖ್ಯ. ಬದಲಾಗಿ, ರೈತರ ಹಿತ ಅವರಿಗೆ ಮುಖ್ಯವಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿಕಾರಿದರು.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಅವರು, "ಮುಖ್ಯಮಂತ್ರಿಗಳು ಮೊದಲು ರೈತರನ್ನು ಉಳಿಸಲು ಪ್ರಾಶಸ್ತ್ಯ ನೀಡಲಿ. ಬೆಲೆ ಇಲ್ಲದೆ ರೈತ ಕಂಗಾಲಾಗಿದ್ದಾನೆ. ತಕ್ಷಣವೇ ಖರೀದಿ ಕೇಂದ್ರವನ್ನು ಪ್ರಾರಂಭಿಸಲಿ" ಎಂದು ತಿಳಿಸಿದರು.
"ಕೊಪ್ಪಳ ಹಾಗೂ ರಾಯಚೂರು ಭಾಗದಲ್ಲಿ ರೈತರು ಬೆಳೆದ ಭತ್ತಕ್ಕೆ ಸರಿಯಾದ ಬೆಲೆ ದೊರಕುತ್ತಿಲ್ಲ. ಸದ್ಯ ಇರುವ ಭತ್ತ ಬೆಲೆಯೊಂದಿಗೆ ಹೆಚ್ಚುವರಿಯಾಗಿ 500 ರೂ ಬೆಲೆ ಹೆಚ್ಚಿಸಬೇಕು. ಈ ನಡುವೆ ವಿದ್ಯುತ್ ದರ ಕೂಡಾ ಹೆಚ್ಚಿಸಲಾಗಿದೆ. ಕೊರೊನಾದ ಈ ಪರಿಸ್ಥಿತಿಯಲ್ಲಿ ರೈತರು ಕಷ್ಟಪಡುತ್ತಿದ್ದಾರೆ. ಶೀಘ್ರವೇ ಶುಲ್ಕ ಇಳಿಕೆ ಮಾಡಬೇಕು" ಎಂದರು.
"ರೈತರ ಬೆಳೆಗೆ ಬೆಂಬಲ ಬೆಲೆ ಸೇರಿ ನಿಗಮಗಳ ವಿಚಾರವಾಗಿ ಸುದೀರ್ಘವಾದ ಚರ್ಚೆ ನಡೆಸಲು ನ.30ರಂದು ಹಿರಿಯರ ಸಭೆ ಕರೆದಿದ್ದು, ಈ ಸಂದರ್ಭ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ" ಎಂದು ತಿಳಿಸಿದರು.
ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ಬಿಜೆಪಿ ಜಾತಿ ಜಾತಿಗಳನ್ನು ಕೂಡಿಸುವ ಬದಲಾಗಿ ಒಡೆಯುವಂತ ಕಾರ್ಯ ಮಾಡುತ್ತಿದೆ. ಈ ರೀತಿ ಮಾಡಿ ಜಾತಿಗೊಂದು ನಿಗಮ ಮಾಡಲು ಮುಂದಾಗಿದ್ದಾರೆ" ಎಂದು ಆರೋಪಿಸಿದರು.
ಶಾಲಾರಂಭದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, "ಶಾಲಾರಂಭದ ವಿಚಾರವಾಗಿ ಸರ್ಕಾರ ಚರ್ಚಿಸುತ್ತಿದೆ. ಈ ಬಗ್ಗೆ ಅವರ ತೀರ್ಮಾನ ಏನೆಂದು ಕಾದು ನೋಡಬೇಕಿದೆ. ನಮ್ಮ ಸಲಹೆ-ಸೂಚನೆಗಳನ್ನು ಅವರು ಕೇಳಿಲ್ಲ. ಶಾಲಾರಂಭದ ಬಗ್ಗೆ ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ಬಳಿಕ ನಾವು ನಮ್ಮ ನಿರ್ಧಾರವನ್ನು ತಿಳಿಸುತ್ತೇವೆ" ಎಂದು ಹೇಳಿದರು.