ಮುಂಬೈ,ನ.23 (DaijiworldNews/HR): ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಅದರ ವಿರುದ್ಧದ ಹೋರಾಟದಲ್ಲಿ ನಿರ್ಲಕ್ಷ್ಯ ತೋರಬಾರದು ಜೊತೆಗೆ ಲಾಕ್ಡೌನ್ ಹೇರಿಕೆಯನ್ನು ತಪ್ಪಿಸಲು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಜನರು ಹೆಚ್ಚಾಗಿ ಕೊರೊನಾ ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತಿದ್ದರೂ, ಇನ್ನೂ ಕೆಲವರು ಮಾಸ್ಕ್ಗಳನ್ನು ಕಡ್ಡಾಯವಾಗಿ ಬಳಸಬೇಕೆಂಬ ಮಾರ್ಗಸೂಚಿಯನ್ನು ಅನುಸರಿಸುತ್ತಿಲ್ಲ ಮತ್ತು ಇನ್ನೂ ಜನದಟ್ಟಣೆಯ ಸ್ಥಳಗಳಿಗೆ ಹೋಗುತ್ತಿದ್ದಾರೆ ಹಾಗಾಗಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದೆ" ಎಂದರು.
ಇನ್ನು ದೆಹಲಿಯಲ್ಲಿ ಎರಡನೇ ಅಲೆಯ ಕೊರೊನಾ ಪ್ರಕರಣಗಳು ಆತಂಕಕ್ಕೆ ಕಾರಣವಾಗಿದೆ ಮತ್ತು ಅಹಮದಾಬಾದಿನಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗಿದೆ. ಮತ್ತೊಂದು ಲಾಕ್ಡೌನ್ ಏರಿಕೆ ಮಾಡುವುದು ನನಗೆ ಬೇಡ, ಆದರೆ ನೀವು ಸಹ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು, ನಾವು ಲಾಕ್ಡೌನ್ಗೆ ಹೋಗಬೇಕೆ ಅಥವಾ ಎಲ್ಲಾ ಕಡ್ಡಾಯ ಕೊರೊನಾ ಸುರಕ್ಷತಾ ನಿಯಮಗಳನ್ನು ಅನುಸರಿಸಬೇಕೆ ಎಂಬುದನ್ನು ನಾವು ನಿರ್ಧರಿಸಬೇಕಿದೆ ಎಂದು ಹೇಳಿದ್ದಾರೆ.
ಸುರಕ್ಷತಾ ನಿಯಮಗಳನ್ನು ಅನುಸರಿಸದೇ ಇರುವುದರಿಂದ ಯುವಕರು ಸೋಂಕಿಗೆ ಒಳಗಾಗುತ್ತಿದ್ದಾರೆ ಮತ್ತು ಅವರಿಂದಾಗಿ ಅವರ ಮನೆಯ ಹಿರಿಯ ನಾಗರಿಕರಿಗೆ ಸೋಂಕು ಹರಡುತ್ತದೆ. ಹಾಗಾಗಿ ಸುರಕ್ಷತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.