ತುಮಕೂರು, ನ.23 (DaijiworldNews/PY): "ಡಿ.ಕೆ.ಶಿವಕುಮಾರ್ ಅವರು ಮೊದಲು ಕಾನೂನು ಪಾಲಿಸಬೇಕು. ತಮ್ಮ ಅನುಕೂಲಕ್ಕೆ ಅನುಗುಣವಾಗಿ ಅವರು ಮಾತನಾಡುವವರು" ಎಂದು ಉಪಮುಖ್ಯಮಂತ್ರಿ ಡಾ.ಸಿ.ಎಸ್.ಅಶ್ವತ್ಥ ನಾರಾಯಣ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಬಿಐ ರೋಷನ್ ಬೇಗ್ ಅವರ ಮೇಲೆ ಕಾನೂನು ರೀತಿಯಲ್ಲಿ ದಾಳಿ ನಡೆಸಿ ಅವರನ್ನು ಬಂಧಿಸಿದೆ. ತನಿಖೆಯು ಕಾನೂನು ಪ್ರಕಾರ ನಡೆಯುತ್ತದೆ" ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, "ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆಯ ಬಗ್ಗೆ ಸಿಎಂ ಬಿಎಸ್ವೈ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದು ಹೇಳಿದರು.
ಸಿಎಂ ಬಿಎಸ್ವೈ ಅವರ ಭೇಟಿಗೆ ಅಮಿತ್ ಶಾ ಅವರು ನಿರಾಕರಿಸಿದ್ದು, ಇದು ಮುಖ್ಯಮಂತ್ರಿ ಬದಲಾವಣೆಯ ಮುನ್ಸೂಚನೆ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಅಮಿತ್ ಶಾ ಅವರನ್ನು ಸಿಎಂ ಬಿಎಸ್ವೈ ಅವರು ಭೇಟಿ ಮಾಡುವ ಯಾವುದೇ ಕಾರ್ಯಕ್ರಮವಿರಲಿಲ್ಲ. ಕಾಂಗ್ರೆಸಿಗರು ತಮಗೆ ಅನಿಸಿದಂತೆ ಮಾತನಾಡುತ್ತಾರೆ. ಅಲ್ಲದೇ, ಅವರ ನಡತೆಗಳು ಕೂಡಾ ಬೇಜವಾಬ್ದಾರಿಯುತವಾಗಿವೆ" ಎಂದು ತಿಳಿಸಿದರು.
ಶಿರಾ ಉಪಚುನಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಶಿರಾ ಉಪಚುನಾವಣೆಯ ಸಂದರ್ಭ ಯಾವುದೇ ರೀತಿಯಾದ ಅಕ್ರಮವಾಗಿಲ್ಲ. ಈ ವೇಳೆ ವಿರೋಧ ಪಕ್ಷದವರೂ ಕೂಡಾ ಹಣ ಖರ್ಚು ಮಾಡಿದ್ದಾರೆ" ಎಂದು ಹೇಳಿದರು.