ಡೆಹ್ರಾಡೂನ್, ನ.23 (DaijiworldNews/PY): "ಕೊರೊನಾದ ನಡುವೆಯೂ ಕೂಡಾ 2021ರಲ್ಲಿ ಹರಿದ್ವಾರದಲ್ಲಿ ಕುಂಭಮೇಳ ನಡೆಯಲಿದೆ" ಎಂದು ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.
ಕುಂಭಮೇಳ ಸಿದ್ದತೆಗೆ ಸಂಬಂಧಿಸಿದಂತೆ ಎಬಿವಿಪಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, "ಕುಂಭಮೇಳವು 2021ರ ಜನವರಿ 14ರಿಂದ ಪ್ರಾರಂಭವಾಗಲಿದ್ದು, ಕುಂಭಮೇಳದ ಸಿದ್ದತೆ ಕಾರ್ಯಗಳನ್ನು ಪರಿಶೀಲನೆ ಮಾಡಲು ಸರ್ಕಾರದ ಇಲಾಖೆಯ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ. 15 ದಿನಗಳಲ್ಲಿ ಮುಖ್ಯ ಕಾರ್ಯದರ್ಶಿಯವರೂ ಕೂಡಾ ಪರಿಸ್ಥಿತಿಯ ಪರಿಶೀಲನೆ ಮಾಡಲಿದ್ದಾರೆ" ಎಂದು ತಿಳಿಸಿದ್ದಾರೆ.
"ಕುಂಭಮೇಳದ ಸಂದರ್ಭ 35ರಿಂದ 50 ಲಕ್ಷ ಮಂದಿ ಗಂಗಾ ನದಿಯಲ್ಲಿ ಪವಿತ್ರಸ್ನಾನ ಮಾಡುವ ನಿರೀಕ್ಷೆ ಇದೆ. ಕೊರೊನಾದ ಪರಿಸ್ಥಿತಿಯನ್ನು ಆಧರಿಸಿ ಕುಂಭಮೇಳದ ವಿಸ್ತಾರ ತೀರ್ಮಾನ ಕೈಗೊಳ್ಳಲಾಗುತ್ತದೆ. ಜನರಿಗೆ ಯಾವುದೇ ರೀತಿಯಾದ ತೊಂದರೆ ಆಗದಂತೆ ಗಮನವಹಿಸಲಾಗುತ್ತದೆ" ಎಂದಿದ್ದಾರೆ.
"ಕುಂಭಮೇಳದ ಸಂದರ್ಭ ಸ್ವಚ್ಛತೆಗಾಗಿ ವಿಶೇಷವಾದ ಕಾಳಜಿವಹಿಸಲಾಗುತ್ತದೆ. ಇನ್ನು ಕುಂಭಮೇಳಕ್ಕಾಗಿಯೇ ನಿರ್ಮಾಣ ಮಾಡಲಾಗುತ್ತಿರುವ ಒಂಭತ್ತು ಹೊಸ ಘಾಟ್ಗಳು, ಎಂಟು ಸೇತುವೆಗಳು ಹಾಗೂ ರಸ್ತೆಗಳ ನಿರ್ಮಾಣವು ಪೂರ್ಣಗೊಳ್ಳುವ ಹಂತದಲ್ಲಿದೆ. ಡಿಸೆಂಬರ್ 15ಕ್ಕೆ ಬಹುತೇಕ ಕಾಮಗಾರಿಗಳು ಪೂರ್ತಿಯಾಗಲಿವೆ" ಎಂದು ಕುಂಭಮೇಳದ ಅಧಿಕಾರಿ ದೀಪಕ್ ರಾವತ್ ತಿಳಿಸಿದ್ದಾರೆ.