ತಿರುವನಂತಪುರ, ನ.23 (DaijiworldNews/HR): ಸಾಮಾಜಿಕ ಜಾಲತಾಣ ಅಥವಾ ಮಾಧ್ಯಮಗಳಲ್ಲಿ ಅವಹೇಳನಕಾರಿ, ಮಾನಹಾನಿಕರ ವಿಚಾರಗಳನ್ನು ಪ್ರಚಾರ ಮಾಡುವವರಿಗೆ ಮೂರು ವರ್ಷಗಳ ಜೈಲು ಅಥವಾ 10,000 ರೂ. ದಂಡ ವಿಧಿಸಲು ಅವಕಾಶ ಕೊಡುವ ಸುಗ್ರೀವಾಜ್ಞೆಗೆ ಕೇರಳದ ರಾಜ್ಯಪಾಲ ಅರೀಫ್ ಮೊಹಮ್ಮದ್ ಖಾನ್ ಸಹಿ ಮಾಡಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಕೇರಳ ಪೊಲೀಸ್ ಕಾಯ್ದೆಗೆ ಮಾಡಿರುವ ಈ ತಿದ್ದುಪಡಿಗೆ ಭಾರಿ ವಿರೋಧ ವ್ಯಕ್ತಪಡಿಸಿವೆ.
ಇನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಪತ್ರಿಕಾ ಸ್ವಾತಂತ್ರ್ಯಕ್ಕೆ ಈ ಕಾನೂನಿನಿಂದ ಯಾವುದೇ ಅಡ್ಡಿಯಾಗುವುದಿಲ್ಲ. ಕಾನೂನಿನ ಬಗ್ಗೆ ವಿರೋಧಪಕ್ಷಗಳ ಗ್ರಹಿಕೆ ಆಧಾರರಹಿತ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಈ ಕಾನೂನಿನ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ, "ಕೇರಳದ ಎಲ್ಡಿಎಫ್ ಸರ್ಕಾರ ರೂಪಿಸಿರುವ ಹೊಸ ಕಾನೂನು ಅಚ್ಚರಿ ಮೂಡಿಸಿದೆ. ಈ ದೌರ್ಜನ್ಯಕಾರಿ ನಿರ್ಧಾರಗಳನ್ನು ನನ್ನ ಸ್ನೇಹಿತ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.
ತಿರುವನಂತಪುರದ ಸಂಸದ ಶಶಿ ತರೂರ್ ಟ್ವೀಟ್ ಮಾಡಿ, ಈ ಕಾನೂನು ತೊಂದರೆ ಉಂಟುಮಾಡುವುದಾಗಿದೆ. ಇದನ್ನು ಎಷ್ಟೊಂದು ಸಡಿಲವಾಗಿ ರೂಪಿಸಲಾಗಿದೆ ಎಂದರೆ, ರಾಜಕೀಯ ವಿರೋಧಿಗಳ ವಿರುದ್ಧವೂ ಬಳಸಬಹುದಾಗಿದೆ. ಆಕ್ಷೇಪಾರ್ಹ ಟ್ವೀಟ್, ಹೇಳಿಕೆಗಳು, ಮಹಿಳೆಯರ ನಿಂದನೆ, ಬೆದರಿಕೆ ಹಾಕುವುದು ಮುಂತಾದ ವಿಚಾರಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಅವಕಾಶ ಮಾಡಿಕೊಡುತ್ತದೆ. ಆದರೆ ರಾಜಕೀಯ ವಿರೋಧಿಗಳು, ಪತ್ರಕರ್ತರು ಹಾಗೂ ಟೀಕಾಕಾರರ ವಿರುದ್ಧವೂ ಇದನ್ನು ಬಳಸಬಹುದಾದ ರೀತಿಯಲ್ಲಿ ರೂಪಿಸಲಾಗಿದೆ' ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ಇನ್ನು ಇದಕ್ಕೆ ಸಮರ್ಥನೆ ನೀಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಾಗಲಿ, ನಿಷ್ಪಕ್ಷಪಾತ ಮಾಧ್ಯಮದ ವಿರುದ್ಧವಾಗಲಿ ಈ ಕಾನೂನನ್ನು ಬಳಸುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.