ಮುಂಬೈ, ನ. 22 (DaijiworldNews/HR): ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ಡೌನ್ ಜಾರಿಗೊಳಿಸುವ ಬಗ್ಗೆ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮುನ್ಸೂಚನೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿದೆ, ದೀಪಾವಳಿ ಮತ್ತು ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಮಾರುಕಟ್ಟೆ ಪ್ರದೇಶಗಳಲ್ಲಿ ಜನಸಂದಣಿ ಸೇರಿದನ್ನು ನಾವು ನೋಡಿದ್ದು, ಈ ಕುರಿತು ಸಂಬಂಧಿತ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಮುಂದಿನ 8 ರಿಂದ10 ದಿನಗಳವರೆಗೆ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಲಾಕ್ಡೌನ್ ಬಗ್ಗೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಇನ್ನು ಕೊರೊನಾದ ಎರಡನೇ ಅಲೆ ಇರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಶಾಲೆಗಳನ್ನು ಪ್ರಾರಂಭಿಸುವ ಕುರಿತು ಸರ್ಕಾರ ಹಲವು ನಿಯಮಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದ್ದಾರೆ.