ಚಿತ್ರದುರ್ಗ,ನ. 22 (DaijiworldNews/HR): ನನ್ನ 30 ವರ್ಷದ ರಾಜಕಾರಣ ಹಾಗೂ ಮಂತ್ರಿಯಾದಾಗಲೂ ನನ್ನ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ ಹಾಗಾಗಿ ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಯಾವುದೇ ರೀತಿಯ ಕಮಿಷನ್ ತನಿಖೆಯೂ ನಡೆದಿಲ್ಲ. ಮಾಡಿರುವ ತನಿಖೆಗಳೆಲ್ಲವೂ ಕೂಡಾ ಮುಗಿದಿವೆ. ಆದಾಯಕ್ಕಿಂತ ಆಸ್ತಿ ಜಾಸ್ತಿಯಾಗಿದೆ ಎಂದು ಒಂದು ಕೇಸ್ ಸಿಬಿಐಗೆ ನೀಡಿದ್ದಾರೆ ಹಾಗಾಗಿ ಆ ಕಾರಣಕ್ಕೆ ದಾಳಿ ಮಾಡಿದ್ದರು, ಈಗ ಸಮನ್ಸ್ ನೀಡಿದ್ದಾರೆ, ಕಾನೂನಿಗೆ ಗೌರವ ನೀಡಿ ಉತ್ತರಿಸುತ್ತೇನೆ ಎಂದರು
ಇನ್ನು ಕಾಂಗ್ರೆಸ್ ಪಕ್ಷವು ದೇಶ ವಿರೋಧಿ ಎಂಬ ಪ್ರಹ್ಲಾದ್ ಜೋಷಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಾನು ಹೆಗಲ ಮೇಲೆ ಹಾಕಿಕೊಂಡಿರುವ ಶಾಲು ತೋರಿಸಿ ಇದು ಬಾವುಟ. ಕಾಂಗ್ರೆಸ್ ನವರಿಗೆ ಮಾತ್ರ ಇದು ಇರುವುದು ಬೇರೆ ಯಾರಿಗೂ ಇಲ್ಲ. ಇದೊಂದೆ ಉತ್ತರ ಎಂದು ತಿರುಗೇಟು ನೀಡಿದ್ದಾರೆ.