ಬೆಂಗಳೂರು, ನ. 22 (DaijiworldNews/MB) : ಮುಂದಿನ ದಿನಗಳಲ್ಲಿ ಎರಡನೇ ಕೊರೊನಾ ಅಲೆ ಬರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಪ್ರಾರಂಭಿಸಬೇಕೇ ಅಥವಾ ಬೇಡವೇ ಎಂದು ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ ಮಾಧ್ಯಮ ವರದಿಗಳು ತಿಳಿಸಿವೆ.
ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪ್ರೌಢ ಶಾಲೆ ಮತ್ತು ಪಿಯುಸಿ ಕಾಲೇಜುಗಳನ್ನು ಪ್ರಾರಂಭಿಸಬಹುದು ಎಂದು ಹೆಚ್ಚಿನ ಜನರ ಅಭಿಪ್ರಾಯವಾಗಿದ್ದು. ಈ ಅಭಿಪ್ರಾಯಗಳ ಆಧಾರದ ಮೇಲೆ ಶಿಕ್ಷಣ ಇಲಾಖೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎನ್ನಲಾಗಿದೆ.
ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನವೆಂಬರ್ 23 ರ ಸೋಮವಾರ ಶಿಕ್ಷಣ ಸಚಿವರು, ಆರೋಗ್ಯ ಸಚಿವರು ಮತ್ತು ಎರಡೂ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಕೊರೊನಾ ಸೋಂಕಿನ ಮೊದಲ ಅಲೆ ಕಡಿಮೆಯಾದಂತೆ, ಎರಡನೇ ಅಲೆಯ ಆತಂಕ ದೇಶಕ್ಕೆ ಉಂಟಾಗಿದೆ. ಹರ್ಯಾಣ ಮತ್ತು ಮಹಾರಾಷ್ಟ್ರ ಸರ್ಕಾರಗಳು ಕ್ರಮವಾಗಿ ನವೆಂಬರ್ ಮತ್ತು ಡಿಸೆಂಬರ್ ಅಂತ್ಯದವರೆಗೆ ಶಾಲೆಗಳನ್ನು ತೆರೆಯಲು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿವೆ.
ಈ ವಿಷಯದಲ್ಲಿ ಕರ್ನಾಟಕ ಸರ್ಕಾರ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಾಗಿದೆ. ಈ ಹಿಂದೆ ಆರೋಗ್ಯ ಇಲಾಖೆ ಮತ್ತು ಕೊರೊನಾ ತಜ್ಞರು ನೀಡಿದ ಅಭಿಪ್ರಾಯಗಳ ಪ್ರಕಾರ ರಾಜ್ಯ ಸರ್ಕಾರವು ಮಾರ್ಗಸೂಚಿ ಹೊರಡಿಸಿದೆ.
ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ಎಂಜಿನಿಯರಿಂಗ್ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಈಗಾಗಲೇ ನವೆಂಬರ್ 17 ರಿಂದ ಕಾಲೇಜುಗಳನ್ನು ಆರಂಭಿಸಲಾಗಿದೆ. ಎಲ್ಲಾ ಮುನ್ನೆಚ್ಚರಿಕೆ ಕ್ರಮದೊಂದಿಗೆ ಕೇವಲ ಶೇ.15 ವಿದ್ಯಾರ್ಥಿಗಳು ಮಾತ್ರ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, "ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಈ ವಿಷಯವನ್ನು ನಾವು ಸೋಮವಾರ ಸಿಎಂ ಅವರೊಂದಿಗೆ ಚರ್ಚಿಸುತ್ತೇವೆ. ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆ ಆರಂಭದ ಬಗ್ಗೆಯೂ ಚರ್ಚೆ ನಡೆಯಲಿದೆ. ಹಾಗೆಯೇ ಇತರೆ ರಾಜ್ಯಗಳ ಪರಿಸ್ಥಿತಿಯ ಬಗ್ಗೆಯೂ ಚರ್ಚೆ ನಡೆಯಲಿದೆ. ನಾವು ಆರೋಗ್ಯ ಇಲಾಖೆಯಿಂದ ಸಲಹೆಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.