ಸೊನಭದ್ರ, ನ. 22 (DaijiworldNews/MB) : ''ಕುಡಿಯುವ ನೀರು ಪೂರೈಕೆಯು ಸ್ವಾತಂತ್ರ್ಯ ಬಳಿಕ ದಶಕಗಳವರೆಗೆ ನಿರ್ಲಕ್ಷ್ಯ ಕಂಡ ವಲಯವಾಗಿದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಡಿಯೊ ಕಾನ್ಫರೆನ್ಸ್ ಮೂಲಕ ಉತ್ತರ ಪ್ರದೇಶದ ಮಿರ್ಜಾಪುರ ಮತ್ತು ಸೊನಭದ್ರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
''ಸ್ವಾತಂತ್ರ್ಯ ಬಳಿಕ ದಶಕಗಳವರೆಗೆ ನಿರ್ಲಕ್ಷ್ಯ ಕಂಡ ವಲಯ ಎಂಬುದು ಇದ್ದರೆ ಅದು ಕುಡಿಯುವ ನೀರಿನ ಸೌಲಭ್ಯ ಯೋಜನೆ. ವಿಂದ್ಯಾಚಲ ಅಥವಾ ಬುಂದೇಲ್ ಖಂಡ್ ಗಳಲ್ಲಿ ಸಾಕಷ್ಟು ಸಂಪನ್ಮೂಲಗಳಿದ್ದರೂ ಕೂಡಾ ನೀರಿನ ಕೊರತೆಯಿಂದಾಗಿ ಈ ಪ್ರದೇಶದವು ಕೊರತೆಯ ಸ್ಥಳವಾಗಿ ಕಂಡಿದೆ. ಇಲ್ಲಿನ ಹಲವು ಪ್ರದೇಶಗಳು ಬರಡಾಗಿ ಮತ್ತು ಬರಗಾಲಪೀಡಿತ ಪ್ರದೇಶಗಳಾಗಿ ಕಂಡವು. ಈ ಕಾರಣದಿಂದ ಇಲ್ಲಿಂದ ಹಲವು ಜನರು ಬೇರೆ ಪ್ರದೇಶಕ್ಕೆ ವಲಸೆ ಹೋಗಬೇಕಾಯಿತು'' ಎಂದು ಹೇಳಿದರು.
''ಆದರೆ ಈಗ ಪ್ರತಿ ಮನೆಗೂ ನೀರಿನ ಯೋಜನೆ ಜಾರಿಗೆ ಬಂದು ಒಂದು ವರ್ಷವಾಗಿದೆ'' ಎಂದು ಅವರು ಹೇಳಿದರು.
''ಈವರೆಗೆ 2.60 ಕೋಟಿಗೂ ಅಧಿಕ ಜನರಿಗೆ ಕುಡಿಯುವ ನೀರನ್ನು ನಳ್ಳಿ ಮೂಲಕ ಎಲ್ಲಾ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಈ ಹೊಸ ಯೋಜನೆಯಿಂದಾಗಿ ಪ್ರತಿ ಮನೆಗೆ ನೀರು ಸರಬರಾಜು ಕಾರ್ಯ ಮತ್ತಷ್ಟು ವೇಗ ಪಡಯಲಿದೆ'' ಎಂದು ಹೇಳಿದರು.