ಜೈಪುರ, ನ. 22 (DaijiworldNews/HR): ರಾಜಸ್ಥಾನ ಸರ್ಕಾರ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜೈಪುರ, ಜೋಧ್ಪುರ, ಕೋಟಾ, ಬಿಕನೇರ್, ಉದಯಪುರ, ಅಜ್ಮೀರ್, ಅಲ್ವಾರ್ ಮತ್ತು ಭಿಲ್ವಾರಾ ಎಂಬ ಎಂಟು ಜಿಲ್ಲೆಗಳಲ್ಲಿ ರಾತ್ರಿ 8 ರಿಂದ ಬೆಳಿಗ್ಗೆ 6ರವರೆಗೆ ರಾತ್ರಿ ಕರ್ಫ್ಯೂ ವಿಧಿಸಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊರೊನಾದಿಂದ ಅನೇಕ ತೊಂದರೆಗೆ ಒಳಗಾದ ಎಂಟು ನಗರಗಳಾದ (ಜೈಪುರ, ಜೋಧ್ಪುರ, ಕೋಟಾ, ಬಿಕನೇರ್, ಉದಯಪುರ, ಅಜ್ಮೀರ್, ಅಲ್ವಾರ್ ಮತ್ತು ಭಿಲ್ವಾರಾ) ರಾತ್ರಿ ಕರ್ಫ್ಯೂ ಹೇರುವುದು ಸೇರಿದಂತೆ ಕೊರೊನಾ ಸೋಂಕನ್ನು ತಡೆಗಟ್ಟುವ ಕುರಿತು ಚರ್ಚಿಸಲು ಸಚಿವ ಸಂಪುಟದ ಸಭೆ ಸೇರಿತು. ಸಭೆಯಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.
ಇನ್ನು ರಾತ್ರಿ ಕರ್ಫ್ಯೂ ಸಮಯದಲ್ಲಿ, ವಿವಾಹ ಸಮಾರಂಭಕ್ಕೆ ಹೋಗುವವರಿಗೆ, ಔಷಧಿಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ಸಂಬಂಧಿಸಿದ ಜನರಿಗೆ ಮತ್ತು ಬಸ್, ರೈಲು ಮತ್ತು ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.