ಬೆಂಗಳೂರು, ನ. 22 (DaijiworldNews/MB) : ಈಗಾಗಲೇ ಕಾಲೇಜುಗಳಲ್ಲಿ ತರಗತಿಗಳನ್ನು ಪ್ರಾರಂಭಿಸಿರುವುದರಿಂದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ಗಳನ್ನು ಮತ್ತೆ ತೆರೆಯಲು ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿದೆ. ಆದರೆ ಈ ಹಾಸ್ಟೆಲ್ನಲ್ಲಿ ತಂಗಿದ್ದ ಕೊರೊನಾ ಸೋಂಕಿತರು ಬಳಸಿದ್ದ ಹಾಸಿಗೆ, ಬೆಡ್ಶೀಟ್ಗಳು, ಕಂಬಳಿಗಳು ಮತ್ತು ದಿಂಬುಗಳನ್ನು ಬಳಸುವಂತೆ ಅಧಿಕಾರಿಗಳು ಹೊರಡಿಸಿದ ಆದೇಶವು ವಿದ್ಯಾರ್ಥಿಗಳಲ್ಲಿ ಆತಂಕವನ್ನುಂಟು ಮಾಡಿದೆ.
ಈ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸುತ್ತಿದ್ದಂತೆ, ರೋಗಿಗಳನ್ನು ಕ್ವಾರಂಟೈನ್ನಲ್ಲಿ ಇರಿಸಲು ಹಾಸ್ಟೆಲ್ಗಳನ್ನು ಕೊರೊನಾ ಕ್ವಾರಂಟೈನ್ ಕೇಂದ್ರವನ್ನಾಗಿ ಪರಿವರ್ತಿಸಲಾಗಿತ್ತು. ಬಳಿಕ ಈಗ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಕಾಲೇಜುಗಳು ಆರಂಭವಾಗಿದ್ದು ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲು ಹಾಸ್ಟೆಲ್ಗಳನ್ನು ಮತ್ತೆ ತೆರೆಯಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಮಿತಿಗೆ ಒಳಪಡುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿ ನಿಲಯಗಳಿಗೆ ರಾಜ್ಯ ಸರ್ಕಾರ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್ಒಪಿ) ಸಿದ್ಧಪಡಿಸಿದೆ. ಈ ಮಾರ್ಗಸೂಚಿಯಲ್ಲಿ, ಸೋಂಕಿತ ರೋಗಿಗಳು ಬಳಸಿದ ಅದೇ ಹಾಸಿಗೆಗಳು ಮತ್ತು ದಿಂಬುಗಳನ್ನು ಸೋಪು ಮತ್ತು ಬಿಸಿ ನೀರಿನಲ್ಲಿ ತೊಳೆದ ನಂತರ ಮರುಬಳಕೆ ಮಾಡಲು ಸೂಚನೆಗಳನ್ನು ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ.
ಹಾಸ್ಟೆಲ್ ಅನ್ನು ಕೊರೊನಾ ರೋಗಿಗಳ ಕೇಂದ್ರವಾಗಿ ಬಳಕೆ ಮಾಡಿದ್ದರೆ, ಹಾಸಿಗೆ, ಬೆಡ್ಶೀಟ್, ಬೆಡ್ ಕವರ್, ದಿಂಬು, ಕಂಬಳಿಗಳನ್ನು ಡೆಟ್ಟಾಲ್ ಅಥವಾ ಸಾವ್ಲಾನ್ ಬೆರೆಸಿ ಬಿಸಿ ನೀರಿನಲ್ಲಿ ಮುಳುಗಿಸಿ ಬಳಿಕ ಸೋಪಿನಿಂದ ತೊಳೆಯಬೇಕು. ಬಳಿಕ ಸೂರ್ಯನ ಶಾಖದಲ್ಲಿ ಒಣಗಿಸಿ, ಇಸ್ತ್ರಿ ಮಾಡಿ ಮರುಬಳಕೆ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಹಾಸ್ಟೆಲ್ನಲ್ಲಿ ವಾಸಿಸುವ ಯಾವುದೇ ವಿದ್ಯಾರ್ಥಿ ಅಥವಾ ಸಿಬ್ಬಂದಿಯು ಕೊರೊನಾ ಸೋಂಕು ಲಕ್ಷಣಗಳನ್ನು ಹೊಂದಿದ್ದರೆ ಅವನು ಅಥವಾ ಅವಳು ತಕ್ಷಣ ಸೂಕ್ತ ಚಿಕಿತ್ಸೆ ಪಡೆಯಬೇಕು. ಅಂತಹ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲು ಹಾಸ್ಟೆಲ್ನಲ್ಲಿ ಪ್ರತ್ಯೇಕ ಕೋಣೆಯಲ್ಲಿ ಇರಿಸಬೇಕು. ಯಾವುದೇ ವಿದ್ಯಾರ್ಥಿಗೆ ಕೊರೊನಾ ಸೋಂಕು ಪಾಸಿಟಿವ್ ಆದರೆ, ಅಂತಹ ವಿದ್ಯಾರ್ಥಿಯನ್ನು ಹಾಸ್ಟೆಲ್ನಲ್ಲಿ ಉಳಿಸಬಾರದು. ಅವನು ಅಥವಾ ಆಕೆಯನ್ನು ತಕ್ಷಣ ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಮಧುಮೇಹ, ಮೂತ್ರಪಿಂಡ ಕಾಯಿಲೆ, ಹೃದ್ರೋಗ ಅಥವಾ ಕ್ಯಾನ್ಸರ್ ಮುಂತಾದವುಗಳಿಂದ ತಾವು ಬಳಲುತ್ತಿಲ್ಲ ಎಂದು ವಿದ್ಯಾರ್ಥಿಗಳಿಂದ ಲಿಖಿತವಾಗಿ ಸ್ಪಷ್ಟನೆ ಪಡೆದು ಬಳಿಕ ಹಾಸ್ಟೆಲ್ನಲ್ಲಿ ಉಳಿಯಲು ಅವಕಾಶ ನೀಡಬೇಕು. ಹಾಗೆಯೇ ಪೋಷಕರ ಒಪ್ಪಿಗೆ ಕೂಡಾ ಅತ್ಯವಶ್ಯಕ. ಕೊರೊನಾ ಸೋಂಕು ಪರೀಕ್ಷೆ ನಡೆಸಿದ ಬಳಿಕ ನೆಗೆಟಿವ್ ವರದಿ ಬಂದರೆ ಮಾತ್ರ ವಿದ್ಯಾರ್ಥಿಗೆ ಹಾಸ್ಟೆಲ್ನಲ್ಲಿ ಉಳಿಯಲು ಅವಕಾಶ ನೀಡಬಹುದಾಗಿದೆ.
ಇನ್ನು ತಜ್ಞರ ಪ್ರಕಾರ ಕೊರೊನಾ ವೈರಸ್ ಸೋಂಕು ಎರಡು ದಿನಗಳವರೆಗೆ ಬಟ್ಟೆಗಳ ಮೇಲೆ ಉಳಿಯುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಸೋಂಕಿತರು ಬಳಸಿದ ವಸ್ತು ಮರು ಬಳಕೆಯಿಂದ ಅಪಾಯವಿಲ್ಲ. ಅವರು ಬಳಸಿದ ವಸ್ತುಗಳನ್ನು ಸೋಂಕುನಿವಾರಕಗಳನ್ನು ಸಿಂಪಡಿಸಿದ ಮರುಬಳಕೆ ಮಾಡಬಹುದು ಎಂಬುದು ತಜ್ಞರ ಸಲಹೆಯಾಗಿದೆ.