ಅಗರ್ತಲ, ನ. 22 (DaijiworldNews/MB) : ಆರು ಸಾವಿರಕ್ಕೂ ಹೆಚ್ಚು ಸ್ಥಳಾಂತರಗೊಂಡ ಮಿಜೋರಾಂನ ಬ್ರು ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಕಳೆದ ಆರು ದಿನಗಳಿಂದ ಉತ್ತರ ತ್ರಿಪುರಾದ ಪಾಣಿಸಾಗರ್ ಪ್ರದೇಶದ ಚಾಂಟಿಲ್ಲಾ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಂಟಿ ಚಳವಳಿ ಸಮಿತಿ(ಜೆಎಂಸಿ) ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು ಜೆಎಂಸಿ ಕಾರ್ಯಕರ್ತರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ನಾಗರಿಕ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ.
ಜೆಎಂಸಿ ಕಾರ್ಯಕರ್ತರು ಕಳೆದ ಆರು ದಿನಗಳಿಂದ ಪಾನಿಸಾಗರದಲ್ಲಿ ರಸ್ತೆ ತಡೆ ನಡೆಸುತ್ತಿದ್ದು ಹಿಂಸಾಚಾರಕ್ಕೆ ತಿರುಗಿದ ಈ ಪ್ರತಿಭಟನೆಯಲ್ಲಿ ಓರ್ವ ನಾಗರಿಕ ಗುಂಡೇಟಿಗೆ ಬಲಿಯಾದರೆ ಐವರು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಕನಿಷ್ಠ 9 ಮಂದಿ ಗಾಯಗೊಂಡಿದ್ದಾರೆ.
ಕಳೆದ ರಾತ್ರಿಯಿಂದ ಪಾನಿಸಾಗರ್ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಪ್ರಹಾರ ಹಾಗೂ ಅಶ್ರವಾಯು ಪ್ರಯೋಗವನ್ನು ನಡೆಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಯುವಕರು ಸೇರಿದಂತೆ ಸಾವಿರಾರರು ನಾಗರಿಕರು ಪಾನಿಸಾಗರ್ಗೆ ಹೋಗುತ್ತಿದ್ದ ಸಂದರ್ಭ ಭದ್ರತಾ ಸಿಬ್ಬಂದಿ ತಡೆದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.