ಗುವಾಹಟಿ, ನ. 22 (DaijiworldNews/MB) : ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ಯವರು ಪ್ರಜ್ಞಾ ಹೀನಾ ಸ್ಥಿತಿಯಲ್ಲಿದ್ದು ಆರೋಗ್ಯ ಚಿಂತಾಜನಕವಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ, ''ತರುಣ್ ಗೊಗೊಯ್ ಉಸಿರಾಟದ ತೊಂದರೆಯಿಂದ ಪ್ರಜ್ಞಾಹೀನರಾಗಿದ್ದಾರೆ'' ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕು ದೃಢಪಟ್ಟಿದ್ದ ಅವರು ಕೆಲವು ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ನವೆಂಬರ್ 2ರಂದು ಆರೋಗ್ಯ ತೀರಾ ಹದಗೆಟ್ಟ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ ತುರ್ತು ನಿಗಾ ಘಟಕದಲ್ಲಿ ವೆಂಟಿಲೇಟರ್ ನೆರವಿನಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇನ್ನು ತರುಣ್ ಗೊಗೊಯ್ಯವರ ಆರೋಗ್ಯದ ಬಗ್ಗೆ ತಿಳಿಸಿರುವ ಆಸ್ಪತ್ರೆಯ ಆರೋಗ್ಯ ಅಧೀಕ್ಷಕ ಅಭಿಜಿತ್ ಶರ್ಮರವರು, ''ಗೊಗೊಯ್ಯವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರು ಪ್ರಸ್ತುತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಉಸಿರಾಟದ ಸಮಸ್ಯೆ'' ಅವರಿಗಿದೆ ಎಂದು ತಿಳಿಸಿದ್ದಾರೆ.