ಬೆಂಗಳೂರು, ನ. 22 (DaijiworldNews/MB) : ''ಲವ್ ಜಿಹಾದ್ ಅನ್ನು ಕಾನೂನು ವ್ಯಾಖ್ಯಾನಿಸಿಲ್ಲ, ಮದುವೆ ಅವರವರ ವೈಯಕ್ತಿಕ ವಿಚಾರ. ಅಷ್ಟಕ್ಕೂ ಯಾರು ಯಾರನ್ನು ಮದುವೆಯಾಗ್ಬೇಕು ಹೇಳೋಕೆ ನೀವ್ಯಾರು'' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದರು.
ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ''ಯಾರು ಯಾರನ್ನು ವಿವಾಹವಾಗಬೇಕು ಎಂದು ಹೇಳಲು ನೀವು ಯಾರು? ನೀವು ಹೇಳಿದವರನ್ನು ವಿವಾಹವಾಗಲು ಆಗುತ್ತಾ? ಮದುವೆ ಎಂಬುದು ಅವರವರ ವೈಯಕ್ತಿಕ ವಿಚಾರ, ಸ್ವಾತಂತ್ಯ್ರ, ಆ ವಿಚಾರದಲ್ಲಿ ಯಾರೂ ಕೂಡಾ ಯಾರ ಮೇಲೆಯೂ ಬಲವಂತ ಮಾಡುವಂತಿಲ್ಲ. ಅಷ್ಟಕ್ಕೂ ಈ ಸರ್ಕಾರ ತನ್ನ ವೈಫಲ್ಯ ಮುಚ್ಚಲು ಈ ವಿಚಾರಗಳನ್ನು ಮುಂದೆ ತಂದು ಜನರ ದಾರಿ ತಪ್ಪಿಸುತ್ತಿದೆ'' ಎಂದು ಹೇಳಿದರು.
ರಾಜ್ಯದಲ್ಲೀಗ ಲವ್ ಜಿಹಾದ್ ನಿಷೇಧ ಕಾನೂನು ಹಾಗೂ ಗೋ ಹತ್ಯೆ ನಿಷೇಧ ಕಾನೂನು ಜಾರಿ ಮಾಡುವ ವಿಚಾರದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ದ ಸಿದ್ದರಾಮಯ್ಯನವರು ಚಾಟಿ ಏಟು ಬೀಸಿದ್ದಾರೆ.
''ಲವ್ ಜಿಹಾದ್ ಎಂದರೆ ಏನೆಂದು ಯಾವ ಕಾನೂನಿನಲ್ಲೂ ಇಲ್ಲ. ಮದುವೆಗೆ ಜಾತಿ, ಧರ್ಮಗಳ ನಿರ್ಬಂಧ ಯಾವುದೇ ಕಾನೂನಿನಲ್ಲಿ ಇಲ್ಲ ಎಂದು ಕೇಂದ್ರ ಗೃಹ ಸಚಿವರು ಸಂಸತ್ತಿನಲ್ಲೇ ಹೇಳಿದ್ದಾರೆ. ಆದರೆ ಈಗ ಬಿಜೆಪಿ ನಾಯಕರು ಲವ್ ಜಿಹಾದ್ ಎಂದು ಹೇಳುತ್ತಲ್ಲೇ ಇದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒಮ್ಮೆ ಕೇಂದ್ರ ಗೃಹ ಸಚಿವರನ್ನು ಕೇಳಲಿ'' ಎಂದು ರವಿಗೆ ಟಾಂಗ್ ನೀಡಿದರು.
''ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ಅಂತರ ಧರ್ಮೀಯ ವಿವಾಹ ಅಕ್ರಮವೆಂದು ಹೇಳಿಲ್ಲ. ಆ ತೀರ್ಪನ್ನೆ ಉಲ್ಲೇಖ ಮಾಡಿ ಮಾತನಾಡುವವರು ಸ್ವಲ್ಪ ಆ ತೀರ್ಪನ್ನು ಓದಲಿ ಎಂದು ಹೇಳಿದ ಅವರು ನಾನು ಆರ್ಎಸ್ಎಸ್ ಶಾಖೆಗೆ ಹೋಗಿ ಕಲಿಯುವುದೇನಿಲ್ಲ. ಅದರ ಬಗ್ಗೆ ತಿಳಿದೇ ಮಾತನಾಡುತ್ತಿದ್ದೇನೆ'' ಎಂದು ಆರ್ಎಸ್ಎಸ್ ಶಾಖೆಗೆ ಬಂದು ಸಿದ್ದರಾಮಯ್ಯ ನೋಡಲಿ ಎಂದು ಹೇಳಿದ್ದ ಸಿ.ಟಿ. ರವಿಗೆ ತಿರುಗೇಟು ನೀಡಿದರು.
ಇನ್ನು ಗೋ ಹತ್ಯೆ ವಿಚಾರದಲ್ಲಿ ಮಾತನಾಡಿದ ಅವರು, ''ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕವೇ ದೇಶದಲ್ಲಿ ಅಧಿಕ ಗೋ ಮಾಂಸ ರಫ್ತಾಗಿದೆ'' ಎಂದು ತಿಳಿಸಿದರು.