ನವದೆಹಲಿ, ನ. 22 (DaijiworldNews/MB) : ''ಕೊರೊನಾದಿಂದ ಹೊರಬರಲು ಆತ್ಮವಿಶ್ವಾಸದಿಂದ ಸಾಮೂಹಿಕ ಪ್ರಯತ್ನ ನಡೆಸಬೇಕು. ವಿಶ್ವದ ಇತರೆ ರಾಷ್ಟ್ರಗಳ ಸಾಮೂಹಿಕ ಪ್ರಯತ್ನದಿಂದ ಕೊರೊನಾ ಸಮಸ್ಯೆಯಿಂದ ಹೊರಬರುವುದು ಸಾಧ್ಯ'' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಸೌದಿ ಅರೇಬಿಯಾ ಆಯೋಜಿಸಿದ್ದ ಜಿ20 ವರ್ಚುವಲ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ''ಕೊರೊನಾ ಸಂಕಷ್ಟದಿಂದ ಹೊರಬರಲು ಆತ್ಮವಿಶ್ವಾಸದಿಂದ ಸಾಮೂಹಿಕ ಪ್ರಯತ್ನ ನಡೆಸಬೇಕು. ಇದರಿಂದಾಗಿ ನಮ್ಮ ಸಮಾಜಕ್ಕೆ ಕೂಡ ಸ್ಫೂರ್ತಿ ದೊರಕುತ್ತದೆ'' ಎಂದು ಹೇಳಿದರು.
''ಜಿ 20 ಶೃಂಗಸಭೆ ಅಡೆತಡೆ ಇಲ್ಲದೆ ನಡೆಯಲು ಸಾಗಲು ನಾವು ಡಿಜಿಟಲ್ ಸೌಲಭ್ಯವನ್ನು ಭಾರತದ ಐಟಿ ತಂತ್ರಜ್ಞಾನಗಳ ಮೂಲಕ ಒದಗಿಸಿದ್ದೇವೆ'' ಎಂದು ಕೂಡಾ ತಿಳಿಸಿದರು.
''ತಂತ್ರಜ್ಞಾನವು ಮನುಷ್ಯನಲ್ಲಿ ಬಹು ಕೌಶಲ್ಯ ಮತ್ತು ಮರು ಕೌಶಲ್ಯ ಪ್ರತಿಭೆಯನ್ನು ಹೆಚ್ಚಿಸುತ್ತದೆ. ಹೊಸ ತಂತ್ರಜ್ಞಾನಗಳು ಮಾನವನಿಗೆ ಸಹಾಯಕವಾಗಬೇಕು. ಆ ಸಂದರ್ಭದಲ್ಲಿ ಮಾತ್ರ ಅದು ಉಪಯುಕ್ತವೆಂದು ಪರಿಗಣಿಸಬಹುದು'' ಎಂದು ಹೇಳಿದರು.