ಬೆಂಗಳೂರು, ನ. 21 (DaijiworldNews/MB) : ''ಕೋಮುವಾದದ ಹೊಂಡದಲ್ಲಿ ಮುಳುಗಿರುವ ನಿಮಗೆ ಆರ್ಎಸ್ಎಸ್ ಬಗ್ಗೆ ಮಾತನಾಡುವ ಅರ್ಹತೆ ಇದೆಯೇ?'' ಎಂದು ವಿಪಕ್ಷ ಕಾಂಗ್ರೆಸ್ನ್ನು ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರು ಪ್ರಶ್ನಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಸಿ.ಟಿ. ರವಿಯವರು, ''ವಿಪಕ್ಷ ನಾಯಕ ಸಿದ್ದರಾಮಯ್ಯನವರು ಆರ್ಎಸ್ಎಸ್ ಶಾಖೆಗೆ ಖುದ್ದಾಗಿ ಬಂದಿ ತಿಳಿಯಬೇಕು. ಆರ್ಎಸ್ಎಸ್ ಜಾತಿ ಸಂಘಟನೆಯಲ್ಲ, ದೇಶಕ್ಕಾಗಿ ಕೆಲಸ ಮಾಡುವ ಸಂಘಟನೆ'', ಎಂದು ಆರ್ಎಸ್ಎಸ್ನ್ನು ಜಾತಿ ಸಂಘಟನೆ ಎಂದು ಲೇವಡಿ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಹೇಳಿದ್ದರು.
ಇದಕ್ಕೆ ಶನಿವಾರ ತಿರುಗೇಟು ನೀಡಿದ್ದ ಕಾಂಗ್ರೆಸ್, ''ಗಾಂಧಿ ಹತ್ಯೆಯಲ್ಲಿ ಕೈವಾಡವಿರುವ ವಿಚಾರದಲ್ಲಿ ಸರ್ದಾರ್ ವಲ್ಲಭಾಯ್ ಪಟೇಲ್ ಅವರಿಂದ ನಿಷೇಧಕ್ಕೊಳಪಟ್ಟಿದ್ದ, ತ್ರಿವರ್ಣ ಧ್ವಜವನ್ನ ಒಪ್ಪದಿದ್ದ, ಸಂವಿಧಾನವನ್ನು, ಅದರ ಆಶಯಗಳನ್ನು ಗೌರವಿಸದ ಸಂಘಟನೆಯಿಂದ ಕಲಿಯುವುದು ಏನೂ ಇಲ್ಲ, ನೀವು ಆರ್ ಎಸ್ ಎಸ್ ನ ಕೋಮುವಾದಿ ಮನಸ್ಥಿತಿಯನ್ನು ಬಿಟ್ಟು ಬನ್ನಿ, ಸಂವಿಧಾನದ ಪಾಠವನ್ನು ನಾವು ಕಲಿಸುತ್ತೇವೆ'' ಎಂದು ಟ್ವೀಟ್ ಮೂಲಕ ಹೇಳಿದ್ದರೆ, ಸಿದ್ದರಾಮಯ್ಯನವರು, ''ಬಿಜೆಪಿ ನಾಯಕರು ಮೊದಲು ಸಂವಿಧಾನವನ್ನು ಓದಲಿ. ಬೇಕಾದರೆ ನಾನೇ ಸಂವಿಧಾನದ ಪಾಠ ಮಾಡ್ತೇನೆ'' ಎಂದು ಟಾಂಗ್ ನೀಡಿದ್ದರು.
ಇದಕ್ಕೆ ಮತ್ತೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ಸಿ.ಟಿ. ರವಿಯವರು, ''ಒಂದು ಕುಟುಂಬಕ್ಕೋಸ್ಕರ ದೇಶವನ್ನು ಬಲಿ ನೀಡಿದ್ದೇ ನಿಮ್ಮ ಸಾಧನೆಯಲ್ಲವೇ? ಗಾಂಧಿಯವರ ತತ್ವಸಿದ್ಧಾಂತ ಕೊಂದ ನೀವು ಇನ್ನೊಬ್ಬರಿಗೆ ಬೋಧನೆ ಮಾಡುತ್ತಿದ್ದೀರಾ? ಸಂವಿಧಾನವನ್ನು ಧಿಕ್ಕರಿಸಿದ ನಿಮ್ಮಿಂದ ಅದರ ಆಶಯಗಳನ್ನು ತಿಳಿದುಕೊಳ್ಳಬೇಕೆ ನಾನು? ಕೋಮುವಾದದ ಹೊಂಡದಲ್ಲಿ ಮುಳುಗಿರುವ ನಿಮಗೆ ಆರ್ ಏಸ್ ಏಸ್ ಕುರಿತು ಮಾತನಾಡುವ ಅರ್ಹತೆ ಇದೆಯೇ?'' ಎಂದು ಪ್ರಶ್ನಿಸಿದ್ದಾರೆ.