ನವದೆಹಲಿ, ನ.21 (DaijiworldNews/PY): ಐಸಿಎಂಆರ್ ಪ್ರತಿದಿನ ನಡೆಸುತ್ತಿರುವ ಆರ್ಟಿಪಿಸಿಆರ್ ಪರೀಕ್ಷೆಯ ಸಾಮರ್ಥ್ಯವನ್ನು ಹೆಚ್ಚು ಮಾಡುವಂತೆ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ.
ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಗೃಹ ಸಚಿವಾಲಯ, "ಐಸಿಎಂಆರ್ ಪ್ರತಿದಿನ ನಡೆಸುತ್ತಿರುವ ಆರ್ಟಿಪಿಸಿಆರ್ ಪರೀಕ್ಷೆಯ ಸಾಮರ್ಥ್ಯವನ್ನು ಅಮಿತ್ ಶಾ ಅವರ ಸೂಚನೆಯ ಮೇರೆಗೆ ಪ್ರತಿದಿನಕ್ಕೆ 27 ಸಾವಿರದ ಬದಲು 37,200ಕ್ಕೆ ಹೆಚ್ಚಿಸಲಿದೆ" ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
"ದೆಹಲಿಯಲ್ಲಿ ನ.19ರಂದು 30,735 ಆರ್ಟಿಪಿಸಿಆರ್ ಮಾದರಿಯನ್ನು ಸಂಗ್ರಹಿಸಲಾಗಿದೆ" ಎಂದು ಮಾಹಿತಿ ನೀಡಿದೆ.
ದೆಹಲಿಯಲ್ಲಿ ಕೊರೊನಾ ಪರಿಸ್ಥಿತಿ ನಿಯಂತ್ರಿಸಲುವ ಸಲುವಾಗಿ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುವುದರೊಂದಿಗೆ ಹಲವಾರು ಕ್ರಮಗಳನ್ನು ಕೂಡಾ ನ.15ರಂದು ಅಮಿತ್ ಶಾ ಅವರು ಘೋಷಣೆ ಮಾಡಿದ್ದರು.
ದೇಶದಲ್ಲಿ ಶುಕ್ರವಾರ 24 ಗಂಟೆಯ ಅವಧಿಯಲ್ಲಿ ಸುಮಾರು 46,232 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 90,50,598ಕ್ಕೆ ಏರಿಕೆಯಾಗಿದೆ. ಈ ಪೈಕಿ 84,78,124 ಮಂದಿ ಗುಣಮುಖರಾಗಿದ್ದು, 1,32,726 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ 4,39,747 ಸಕ್ರಿಯ ಪ್ರಕರಣಗಳಿವೆ.