ಚೆನ್ನೈ, ನ.21 (DaijiworldNews/PY): ಡಿಎಂಕೆ ಪಕ್ಷದಿಂದ ಅಮಾನತುಗೊಂಡಿದ್ದ ಮಾಜಿ ಸಂಸದ ಕೆ.ಪಿ.ರಾಮಲಿಂಗಂ ಅವರು ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ತಮಿಳುನಾಡಿನ ಬಿಜೆಪಿಯ ಉಸ್ತುವಾರಿ ಸಿ.ಟಿ.ರವಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಎಲ್.ಮುರುಗನ್ ಅವರ ಸಮ್ಮುಖದಲ್ಲಿ ರಾಮಲಿಂಗಂ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಮಾರ್ಚ್ನಲ್ಲಿ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ರಾಮಲಿಂಗಂ ಅವರನ್ನು ಶಿಸ್ತುಕ್ರಮದ ಭಾಗವಾಗಿ ಪಕ್ಷದಿಂದ ಅಮಾನತುಗೊಳಿಸಿದ್ದರು. ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಸ್ಟಾಲಿನ್ ಅವರ ಪ್ರಸ್ತಾವದ ವಿರುದ್ದ ರಾಮಲಿಂಗಂ ಅವರು ಮಾತನಾಡಿದ್ದ ಕಾರಣ ಅವರನ್ನು ಅಮಾನತುಗೊಳಿಸಲಾಗಿತ್ತು.
ರಾಮಲಿಂಗಂ ಅವರು ಕಳೆದ 30 ವರ್ಷಗಳಿಂದ ಡಿಎಂಕೆಯಲ್ಲಿದ್ದರು. ಅಲ್ಲದೇ, 1996ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 2020ರಲ್ಲಿ ಡಿಎಂಕೆ ಮುಖೇನ ಅವರು ರಾಜ್ಯಸಭೆಗೆ ಪ್ರವೇಶ ಮಾಡಿದ್ದರು.