ಬೆಂಗಳೂರು, ನ. 21 (DaijiworldNews/MB) : ಮತ್ಸ್ಯ ಸಂಪದ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಶನಿವಾರ ಚಾಲನೆ ನೀಡಿದರು. ವಿಶ್ವ ಮೀನುಗಾರಿಕಾ ದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿ ಇಂದು ಕಾರ್ಯಕ್ರಮ ಏರ್ಪಡಿಸಲಾಗಿದ್ದು ಇದನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು. ಇದೇ ವೇಳೆ ಮತ್ಸ್ಯಸಿರಿ, ಸಾಗರೋತ್ಪನ್ನ ಖಾದ್ಯಗಳನ್ನು ಮುಖ್ಯಮಂತ್ರಿಯವರು ಬಿಡುಗಡೆ ಮಾಡಿದರು. ಹಾಗೆಯೇ ಸುವರ್ಣ ತ್ರಿಭುಜ ಮೀನುಗಾರಿಕೆ ದೋಣಿ ಅವಘಡದಲ್ಲಿ ಮೃತರಾದ ಏಳು ಮೀನುಗಾರರ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ''ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ಮೀನುಗಾರರ ಸುರಕ್ಷತೆ ಹಾಗೂ ಮೀನುಗಾರಿಕೆಯಲ್ಲಿ ಆದಾಯ ಹೆಚ್ಚಿಸುವುದಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡಿದೆ'' ಎಂದು ಹೇಳಿದರು.
''ಕರ್ನಾಟಕ ರಾಜ್ಯವು 320 ಕಿ.ಮೀ. ಉದ್ದದ ಕರಾವಳಿ ತೀರ ಹಾಗೂ 8 ಸಾವಿರ ಹೆಕ್ಟೇರುಗಳಿಗೂ ಹೆಚ್ಚಿನ ಹಿನ್ನೀರು ಪ್ರದೇಶದೊಂದಿಗೆ ದೇಶದ ಮೀನುಗಾರಿಕಾ ವಲಯಕ್ಕೆ ಮಹತ್ತರವಾದ ಕೊಡುಗೆ ನೀಡುತ್ತಿದೆ. ಮೀನುಗಾರರು ಶ್ರಮಜೀವಿಗಳಾಗಿದ್ದು ಅವರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ ಉತ್ತಮಪಡಿಸಲು ಮೀನುಗಾರರಿಗೆ ಸರ್ಕಾರವು ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುವುದು'' ಎಂದು ಹೇಳಿದರು.
ಹಾಗೆಯೇ ''ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ಮೀನುಗಾರರ ಸುಮಾರು 60.00 ಕೋಟಿ ರೂ.ಗಳ ಸಾಲಮನ್ನಾ ಮಾಡಲಾಗಿದೆ'' ಎಂದು ಕೂಡಾ ಹೇಳಿದರು.
ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಕುಮಾರ ಬಂಗಾರಪ್ಪ, ಶಾಸಕ ರಘುಪತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.