ಗಾಂಧಿನಗರ, ನ.21 (DaijiworldNews/PY): "ಮುಂಬರುವ ದಿನಗಳಲ್ಲಿ ಭಾರತ ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ಶೇ.30 ರಿಂದ ಶೇ.35 ರಷ್ಟು ಕಡಿಮೆ ಮಾಡುವ ಉದ್ದೇಶ ಹೊಂದಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಪಂಡಿತ್ ದೀನ್ದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯದ ಘಟಿಕೋತ್ಸವವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, "ಭಾರತ ಮುಂಬರುವ ದಿನಗಳಲ್ಲಿ ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ಶೇ.30 ರಿಂದ ಶೇ.35 ರಷ್ಟು ಕಡಿಮೆ ಮಾಡಲಿದೆ" ಎಂದು ತಿಳಿಸಿದ್ದಾರೆ.
"ಇಂಧನ ಕ್ಷೇತ್ರದಲ್ಲಿ ಸ್ಟಾರ್ಟ್ ಆಪ್ಗಳನ್ನು ಬಲಪಡಿಸುವ ಕಾರ್ಯವು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಇದಕ್ಕಾಗಿ ವಿಶೇಷ ನಿಧಿ ತೆಗೆದಿರಿಸಲಾಗಿದೆ. ನಿಮ್ಮ ಬಳಿ ಹೊಸ ಯೋಚನೆ, ಯೋಜನೆ ಇದ್ದರೆ ಈ ವಿಶೇಷ ನಿಧಿ ನಿಮಗೆ ಅವಕಾಶ ಕಲ್ಪಿಸುತ್ತದೆ. ನಿಮಗೆ ಇದು ಸರ್ಕಾರ ನೀಡುವ ಉತ್ತಮವಾದ ಉಡುಗೊರೆಯಾಗಿದೆ" ಎಂದಿದ್ದಾರೆ.
"ನೈಸರ್ಗಿಕ ಅನಿಲ ಬಳಕೆಯನ್ನು ಈ ದಶಕದಲ್ಲಿ ನಾಲ್ಕು ಬಾರಿ ಹೆಚ್ಚಳ ಮಾಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ತೈಲ ಸಂಸ್ಕರಣಾ ಸಾಮರ್ಥ್ಯವನ್ನು ಕೂಡಾ ದ್ವಿಗುಣಗೊಳಿಸುವ ಕಾರ್ಯ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.