ವಿಜಯಪುರ, ನ. 21 (DaijiworldNews/MB) : ''ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ರೋಲ್ಕಾಲ್ ಹೋರಾಟಗಾರರು ಕರೆ ನೀಡಿರುವ ಕರ್ನಾಟಕ ಬಂದ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಯಾವುದೇ ಭಯಪಡುವುದು ಬೇಡ'' ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಹಿಂದೂ ಧರ್ಮದ ಉಳಿವಿಗಾಗಿ ಹೋರಾಟ ಮಾಡಿದ್ದು ಮರಾಠ ಸಮಾಜ. ಇದು ಕ್ಷತ್ರಿಯ ಸಮಾಜವಾಗಿದೆ. ಕಾನೂನಾತ್ಮಕವಾಗಿ ಈ ಪ್ರಾಧಿಕಾರಕ್ಕೆ ಅಧಿಕ ಸವಲತ್ತು ಕಲ್ಪಿಸಬೇಕು'' ಎಂದು ಆಗ್ರಹಿಸಿದ್ದು, ''ಹಿಂದೂ ಸಮಾಜದ ರಕ್ಷಣೆಗೆ ಶಿವಾಜಿ ಮಹಾರಾಜರು ಕಾರಣೀಕರ್ತರು'' ಎಂದರು.
ಇನ್ನು, ''ಮುಖ್ಯಮಂತ್ರಿಗಳಿಗೆ ಕನ್ನಡಿಗರ ಮತ ಹೋಗುತ್ತೆ ಎಂಬ ಯಾವುದೇ ಆತಂಕ ಬೇಡ. ಈ ಭಯದಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ಮುಖ್ಯಮಂತ್ರಿಗಳು ವಾಪಾಸ್ ಪಡೆದುಕೊಂಡರೆ ದೊಡ್ಡ ಅನಾಹುತವಾಗುತ್ತದೆ'' ಎಂದು ಎಚ್ಚರಿಕೆಯನ್ನು ಕೂಡಾ ನೀಡಿದರು.