ಬೆಂಗಳೂರು, ನ. 21 (DaijiworldNews/MB) : ''ರಾಜ್ಯದ ರಾಜ್ಯಪಾಲರು ಹಿಂದಿ ಹೇರಿಕೆಯ ಏಜೆಂಟ್ರಂತೆ ವರ್ತಿಸುತ್ತಿದ್ದಾರೆ. ರಾಜ್ಯಪಾಲರು ಹಿಂದಿ ಮಾಸ್ಟರ್ ಆಗುವ ಬದಲು ಕನ್ನಡ ಕಲಿಯಲಿ'' ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.
ರಾಜ್ಯದ ರಾಜಪಾಲ ವಜುಭಾಯಿ ವಾಲಾ ದೀಪಾವಳಿ ಹಬ್ಬಕ್ಕೆ ಹಿಂದಿಯಲ್ಲಿ ಶುಭಕೋರಿರುವುದು ಈಗ ಭಾರೀ ಚರ್ಚೆಯಾಗಿದೆ. ರಾಜ್ಯದ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಿಗೂ ಹಿಂದಿ ಭಾಷೆಯಲ್ಲಿ ಮುದ್ರಿತ ಶುಭಾಷಯ ತಿಳಿಸಿದ್ದರು. ಈ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ವೈವಿಧ್ಯತೆಯಲ್ಲಿ ಏಕತೆ ಭಾರತದ ಅಂತಃಶಕ್ತಿ. ದುರಂತವೆಂದರೆ ಬಿಜೆಪಿ ಏಕಭಾಷೆ, ಏಕರಾಷ್ಟ್ರ, ಏಕ ಸರ್ಕಾರ ಹಾಗೂ ಏಕ ನಾಯಕತ್ವವನ್ನು ಪರೋಕ್ಷವಾಗಿ ಪ್ರತಿಪಾದಿಸುತ್ತಿದೆ. ಕೇಂದ್ರದಿಂದ ನೇಮಿತವಾಗಿರುವ ರಾಜ್ಯಪಾಲರು ಆಯಾ ರಾಜ್ಯದ ಸಾಂಸ್ಕೃತಿಕ ರಾಯಭಾರಿಗಳಾಗಿರಬೇಕು. ಆದರೆ ರಾಜ್ಯದ ರಾಜ್ಯಪಾಲರು ಹಿಂದಿ ಹೇರಿಕೆಯ ಏಜೆಂಟ್ರಂತೆ ವರ್ತಿಸುತ್ತಿದ್ದಾರೆ'' ಎಂದು ಹೇಳಿದ್ದಾರೆ.
''ಐಬಿಪಿಎಸ್ ಪರೀಕ್ಷೆಯಿಂದಿಡಿದು ಪ್ರತಿಯೊಂದರಲ್ಲೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕನ್ನಡದ ಅಸ್ಮಿತೆಯನ್ನು ಹಾಳು ಮಾಡುವ ವ್ಯವಸ್ಥಿತ ಸಂಚು ಅಧಿಕಾರಸ್ಥ ಕುರ್ಚಿಯಿಂದಲೇ ನಡೆಯುತ್ತಿರುವುದು ದುರಂತ. ರಾಜ್ಯಪಾಲರು ಹಿಂದಿಯಲ್ಲಿ ಶುಭಾಶಯ ಕೋರಿರುವುದು ಕನ್ನಡಿಗರ ಆತ್ಮಾಭಿಮಾನ ಕೆಣಕಿದಂತೆ. ರಾಜ್ಯಪಾಲರು ಹಿಂದಿ ಮಾಸ್ಟರ್ ಆಗುವ ಬದಲು ಕನ್ನಡ ಕಲಿಯಲಿ'' ಎಂದಿದ್ದಾರೆ.