ಮೈಸೂರು, ನ.21 (DaijiworldNews/PY): "ಕೊರೊನಾ ಲಸಿಕೆ ವಿಚಾರವಾಗಿ ಕೇಂದ್ರ ಹಾಗೂ ಡಬ್ಲ್ಯೂಎಚ್ಒ ಘೋಷಣೆ ಬರುವ ತನಕ ಯಾವುದೇ ಕಂಪೆನಿಗಳ ಹೇಳಿಕೆಗಳನ್ನು ನಂಬಬಾರದು" ಎಂದು ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, "ಕೊರೊನಾ ಲಸಿಕೆಯು ಪ್ರಯೋಗದ ಹಂತದಲ್ಲಿದೆ. ಕೊರೊನಾ ಲಸಿಕೆಯನ್ನು ಶೀಘ್ರವೇ ಕಂಡುಹಿಡಿಯುವುದು ಕಷ್ಟ. ಹಾಗಾಗಿ ಕೊರೊನಾ ಲಸಿಕೆಯ ವಿಚಾರದಲ್ಲಿ ಪ್ರಚಾರ ಅಥವಾ ರಾಜಕೀಯ ಹೇಳಿಕೆಯನ್ನು ನಂಬಬಾರದು. ಲಸಿಕೆ ಇಂದು ಬರುತ್ತದೆ, ನಾಳೆ ಬರುತ್ತದೆ ಎನ್ನುವ ಹೇಳಿಕೆಗಳನ್ನು ನೀಡಿ ಜನರ ಹಾದಿ ತಪ್ಪಿಸುವ ಕಾರ್ಯ ಮಾಡಲಾಗುತ್ತಿದೆ" ಎಂದಿದ್ದಾರೆ.
"ರಾಜ್ಯದ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ. ಅವರು ಕೇಂದ್ರ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯಾದ ಗೊಂದಲ ಅಥವಾ ಅಸಮಾಧಾನವಿಲ್ಲ" ಎಂದು ತಿಳಿಸಿದ್ದಾರೆ.