ಬೆಂಗಳೂರು, ನ. 21 (DaijiworldNews/MB) : ''ರಾಜ್ಯದಲ್ಲಿ ಶೀಘ್ರದಲ್ಲೇ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಲಿದೆ'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಚಿವ ಸಿ.ಟಿ. ರವಿಯವರು ಹೇಳಿದ್ದಾರೆ.
ರಾಜ್ಯದಲ್ಲೀಗ ಲವ್ಜಿಹಾದ್ ನಿಷೇಧ ಕಾಯ್ದೆ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡುವ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಲ್ಲೇ ಇದೆ.
ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು, ''ರಾಜ್ಯದಲ್ಲಿ ಈ ಬಾರಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗುವ ಸಾಧ್ಯತೆ ಇಲ್ಲ'' ಎಂದು ಹೇಳಿದ್ದು ಈ ನಡುವೆ, ''ರಾಜ್ಯದಲ್ಲಿ ಶೀಘ್ರದಲ್ಲೇ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಲಿದೆ'' ಎಂದು ಸಿ. ಟಿ. ರವಿ ಹೇಳಿದ್ದಾರೆ.
''ಪ್ರಭು ಚೌಹಾಣ್ರೊಂದಿಗೆ ಮಾತುಕತೆ ನಡೆಸಲಾಗಿದೆ. ಶೀಘ್ರ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಲಿದೆ. ಹಾಗೆಯೇ ಮುಂದಿನ ಅಧಿವೇಶನದಲ್ಲಿ ಗೋವುಗಳ ಕಳ್ಳತನ, ಹತ್ಯೆ ನಿಷೇಧ ಕಾಯ್ದೆಗಳು ಜಾರಿಯಾಗುತ್ತದೆ. ನಾವೀಗ ಕಠಿಣವಾಗಿ ಗೋಹತ್ಯೆ ನಿಷೇಧ ಜಾರಿಗೆ ತರಬೇಕಾಗಿದೆ. ಕೇವಲ 50 ರೂ ಅಥವಾ 100 ರೂ ದಂಡ ವಿಧಿಸಿದರೆ ಸಾಲದು'' ಎಂದು ತಿಳಿಸಿದ್ದಾರೆ.
''ಈ ಮೊದಲು ಪರಿಚಯಿಸಿದ್ದ ಮಸೂದೆಯನ್ನು ಪರಿಶೀಲಿಸುತ್ತೇವೆ. ಬೇರೆ ರಾಜ್ಯಗಳಲ್ಲಿ ಈ ರೀತಿಯ ಮಸೂದೆಗಳನ್ನು ಜಾರಿಗೆ ತಂದಿರುವ ಬಗ್ಗೆಯೂ ಅಧ್ಯಯನ ನಡೆಸುತ್ತೇವೆ'' ಎಂದಿದ್ದಾರೆ.