ಚನ್ನಪಟ್ಟಣ, ನ.21 (DaijiworldNews/PY): "ಮರಾಠ ಅಭಿವೃದ್ಧಿ ನಿಗಮದ ವಿಚಾರವಾಗಿ ಕರ್ನಾಟಕ ಬಂದ್ ಮಾಡುವ ಅವಶ್ಯಕತೆ ಇಲ್ಲ" ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಹಾರಾಷ್ಟ್ರದವರು ಕೇವಲ ಎರಡು ಮೂರು ಜಿಲ್ಲೆಗಳಲ್ಲಿ ಕ್ಯಾತೆ ತೆಗೆಯುತ್ತಿದ್ದಾರೆ. ಅಲ್ಲಿ ವಾಸ ಮಾಡುತ್ತಿರುವ ಮರಾಠಿಗರು ಕನ್ನಡದ ವಿರುದ್ಧವಿದ್ದಾರೆ. ಆದರೆ, ಇಡೀ ರಾಜ್ಯದಲ್ಲಿ ಮರಾಠಿ ಭಾಷಿಕರು ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಮಾರಾಠಿ ಭಾಷಿಕರು ನಮ್ಮಲ್ಲಿ ಒಂದಾಗಿದ್ದಾರೆ" ಎಂದಿದ್ದಾರೆ.
"ಕನ್ನಡವನ್ನು ಕೆಲವರು ಮಾತ್ರ ವಿರೋಧಿಸುತ್ತಾರೆ. ಆದರೆ, ಎಲ್ಲರೂ ಕನ್ನಡದ ವಿರೋಧಿಗಳಲ್ಲ. ಈ ವಿಚಾರವನ್ನು ಎಲ್ಲರೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಸರ್ಕಾರ ಮತ ಪಡೆಯುವ ನಿಟ್ಟಿನಲ್ಲಿ ಇಂತಹ ಯಾವುದೇ ಅನವಶ್ಯಕವಾದ ತಿರ್ಮಾನವನ್ನು ಕೈಗೊಳ್ಳಬಾರದು" ಎಂದು ತಿಳಿಸಿದ್ದಾರೆ.