ವಿಜಯಪುರ, ನ.20 (DaijiworldNews/PY): "ನಾನು ನನ್ನ ಜೀವಮಾನದಲ್ಲಿ ಗೌರವ ಡಾಕ್ಟರೇಟ್, ಸಹಕಾರಿ ರತ್ನ ಪ್ರಶಸ್ತಿ ಪಡೆಯುವುದಿಲ್ಲ" ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರದಲ್ಲಿ ರಾಷ್ಟ್ರೀಯ ಸಹಕಾರಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಗೌರವ ಡಾಕ್ಟರೇಟ್ ಹಾಗೂ ಸಹಕಾರಿ ರತ್ನ ಪ್ರಶಸ್ತಿಗಳು ಇತ್ತೀಚೆಗೆ ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ರಾಜಕೀಯ ಪ್ರಭಾವ, ಶಿಫಾರಸ್ಸನ್ನು ಆಧರಿಸಿ ನೀಡುವ ಇಂಥ ಗೌರವಗಳು ನಾನು ನನ್ನ ಜೀವಮಾನದಲ್ಲಿ ಪಡೆದುಕೊಳ್ಳುವುದಿಲ್ಲ" ಎಂದಿದ್ದಾರೆ.
ಸಹಕಾರಿ ಇಲಾಖೆ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಅವರು, "ಇತ್ತೀಚೆಗೆ ಸಹಕಾರಿ ವ್ಯವಸ್ಥೆ ಹಾಗೂ ಕಛೇರಿ ಕೂಡಾ ಭ್ರಷ್ಟಾಚಾರಕ್ಕೆ ಒಳಗಾಗುತ್ತಿವೆ. ಕರ್ನಾಟಕದ ಸಹಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕ ಆಡಳಿತ ಬರಬೇಕಿದೆ" ಎಂದು ತಿಳಿಸಿದ್ದಾರೆ.
"ಎಸ್.ಟಿ ಸೋಮಶೇಖರ್ ಅವರು ಪ್ರಾಮಾಣಿಕ ಸಚಿವರು. ಇಂತ ಪ್ರಾಮಾಣಿಕ ಸಚಿವರ ಕೈಯಲ್ಲಿರುವ ಸಹಕಾರಿ ವ್ಯವಸ್ಥೆ ಬೇರುಬಿಟ್ಟಿರುವ ಭ್ರಷ್ಟಾಚಾರವನ್ನು ಅಂತ್ಯ ಮಾಡಬೇಕಿದೆ. ಈ ಬಗ್ಗೆ ಸೋಮಶೇಖರ್ ಅವರು ಕ್ರಮ ತೆಗೆದುಕೊಳ್ಳುವ ಭರವಸೆ ನನಗಿದೆ" ಎಂದಿದ್ದಾರೆ.