ಹೊಸಪೇಟೆ, ನ.20 (DaijiworldNews/PY): "ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ" ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಶುಕ್ರವಾರ ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಕೂಡಾ ಸಿಎಂ ಬಿಎಸ್ವೈ ಅವರೊಂದಿಗೆ ದೆಹಲಿಗೆ ತೆರಳಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದೇವೆ. ಭೇಟಿಯ ಸಂದರ್ಭ ಅವರೊಂದಿಗೆ ಇತ್ತೀಚೆಗೆ ನಡೆದ ಉಪಚುನಾವಣೆ ಸೇರಿದಂತೆ ರಾಜ್ಯದ ಸ್ಥಿತಿಗತಿ ಹಾಗೂ ಪಕ್ಷದ ವಿಚಾರವಾಗಿ ಚರ್ಚಿಸಿದ್ದೇವೆ. ಸಚಿವ ಸಂಪುಟ ವಿಸ್ತರಣೆಯ ಬಗ್ಗೆಇನ್ನೂ ಕೆಲವರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ನಡ್ಡಾ ಅವರು ಹೇಳಿದ್ದಾರೆ" ಎಂದರು.
ವಿಜಯನಗರ ಹೊಸ ಜಿಲ್ಲೆ ರಚನೆಗೆ ಅನುಮತಿ ನೀಡಿದ್ದರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಅರಣ್ಯ ಸಚಿವ ಆನಂದ್ ಸಿಂಗ್ ಅವರ ಪ್ರಯತ್ನದಿಂದ ಇದಕ್ಕೆ ಒಪ್ಪಿಗೆ ದೊರೆತಿದೆ. ನೂತನ ಜಿಲ್ಲೆಗೆ ಎಲ್ಲಾ ರೀತಿಯಾದ ವ್ಯವಸ್ಥೆ ಆಗಬೇಕಾಗಿದೆ" ಎಂದು ತಿಳಿಸಿದರು.