ಕೊಪ್ಪಳ,ನ.20 (DaijiworldNews/HR): ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜನರು ಬಿಜೆಪಿ ಗೆಲ್ಲಿಸುತ್ತಾರೆ, ಒಂದು ವೇಳೆ ಬಸವಕಲ್ಯಾಣ ಉಪಚುನಾವಣೆಯಲ್ಲಿ ಗೆಲ್ಲದಿದ್ದರೆ ಬಿಜೆಪಿ ಬಿದ್ದು ಹೋಗುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾ ಹಾಗೂ ರಾಜರಾಜೇಶ್ವರಿ ನಗರ ಚುನಾವಣೆಯನ್ನೇ ಗೆದ್ದಿದ್ದೇವೆ, ಬಸವ ಕಲ್ಯಾಣ ಗೆಲ್ಲಲ್ವಾ? ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಜಯ ಖಚಿತ ಎಂದರು.
ಇನ್ನು ಸಚಿವ ಸಂಪುಟಕ್ಕೆ ಹೊಸ ಸೇರ್ಪಡೆ ವಿಚಾರದ ಕುರಿತು ಮಾತನಾಡಿದ ಅವರು, ಹೊಸಬರಿಗೆ ಸಚಿವ ಸ್ಥಾನ ನೀಡೋದು ಮುಖ್ಯಮಂತ್ರಿ ಅವರ ಪರಮಾಧಿಕಾರ. ಕೊಪ್ಪಳ ಜಿಲ್ಲೆಯ ಬಿಜೆಪಿ ಶಾಸಕರು ಸಚಿವ ಸ್ಥಾನ ಕೇಳಿದರೆ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.